ಕಾಸರಗೋಡು: ರೇಬೀಸ್ ಬಾಧೆ ಬಗ್ಗೆ ಸಾರ್ವಜನಿಕರು ಜಾಗರೂಕತೆ ವಹಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಏನಿದು ರೇಬೀಸ್ ಬಾಧೆ:
ಹುಚ್ಚು ನಾಯಿ ಸಹಿತ ಮತಿಭ್ರಮಣೆ ಹೊಂದಿರುವ ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗವೇ ರಾಬೀಸ್. ಆರ್.ಎನ್.ಎ. ಎಂಬ ಹೆಸರಿನ ವೈರಸ್ ಈ ರೋಗಕ್ಕೆ ಕಾರಣವಾಗುತ್ತದೆ. ಉಷ್ಣ ರಕ್ತ ಹೊಂದಿರುವ ಎಲ್ಲ ಪ್ರಾಣಿಗಳಿಗೂ ಈ ರಾಬೀಸ್ ರೋಗ ತಗುಲುತ್ತದೆ. ಸೋಂಕು ಮೆದುಳಿಗೆ ತೀವ್ರ ಬಾಧೆ ನೀಡಿ ಸಾವಿಗೂ ಕಾರಣವಾಗುತ್ತದೆ. ಇದನ್ನು "ಎನ್ ಸೆಫಾಲೈಟಿಸ್" ಎಂದು ಕರೆಯಲಾಗುತ್ತದೆ.
ನಾಯಿ ಮತ್ತು ಬೆಕ್ಕುಗಳಲ್ಲಿ ಈ ರೋಗ ಅಧಿಕವಾಗಿ ಕಂಡುಬರುತ್ತದೆ. ಹಂದಿ, ಕತ್ತೆ, ಕುದುರೆ, ನರಿ, ಮಂಗ, ಅಳಿಲುಗಳಿಗೂ ಈ ರೋಗ ತಗುಲುವ ಸಾಧ್ಯತೆಗಳಿವೆ. ಜಾನುವಾರುಗಳಂತೆಯೇ ಕಾಡುಪ0ರಾಣಿಗೂ ಈ ರೋಗ ಬಾಧಿಸುತ್ತದೆ.
ರೋಗ ಲಕ್ಷಣಗಳು ಕಂಡುಬಂದರೆ ಮರಣ ಖಚಿತ
ರೋಗಬಾಧುತ ಪ್ರಾಣಿಗಳ ಎಂಜಲು ರಸದಲ್ಲಿ ಕಂಡು ಬರುವ ವೈರಸ್ ಈ ಪ್ರಾಣಿಗಳ ಕಡಿತದಿಂದಾಗುವ ಗಾಯ/ಗೀರುಗಳ ಮೂಲಕ ಶರೀರ ಪ್ರವೇಶ ಮಾಡುತ್ತದೆ. ನರ-ನಾಡಿಗಳ ಮೂಲಕ ನೇರವಾಗಿ ಮೆದುಳಿಗೆ ಬಾಧಿಸುತ್ತದೆ. ಕೆಲವೊಮ್ಮೆ ಕೆಲವು ತಿಂಗಳ ನಂತರ ಈ ಸಂಬಂಧ ರೋಗ ಲಕ್ಷಣಗಳು ತಲೆದೋರಬಹುದು. ಕೇಂದ್ರ ನಾಡಿ ವ್ಯೂಹವನ್ನು ವೈರಸ್ ಯಾವ ರೂಪದಲ್ಲಿ ಬಾಧಿಸುತ್ತದೆಯೋ, ಆ ಅವಧಿಯಲ್ಲಿ ಮಾತ್ರ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಈ ಕಾರಣದಿಂದ ಕೆಲವರಿಗೆ ಒಂದೇ ವಾರದಲ್ಲಿ ರೋಗ ಲಕ್ಷಣ ಕಂಡುಬಂದರೆ, ಮತ್ತೆ ಕೆಲವರಿಗೆ ಒಂದು ವರ್ಷದ ನಂತರ ರೋಗ ಲಕ್ಷಣ ಕಂಡುಬರಬಹುದು. ರೋಗ ಲಕ್ಷಣಗಳು ಕಂಡುಬಂದಲ್ಲಿ ಮರಣ ಖಚಿತವಾಗಿರುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.
ಚಿಕಿತ್ಸೆ:
ಇಂಥಾ ಪ್ರಾಣಿಗಳ ಕಡಿತಕ್ಕೊಳಗಾದ ಭಾಗವನ್ನು ತಕ್ಷಣ ಸಾಬೂನು , ನೀರು ಬಳಸಿ ಶುಚಿಕೊಳಿಸಬೇಕು. ನಂತರ ಬಟ್ಟೆಯಿಂದ ಸುತ್ತಿಕೊಳ್ಳಬೇಕು. ನಂತರ ರೋಗಾಣು ನಾಶಕವನ್ನು ಸವರಬೇಕು. ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಹುಚ್ಚು ಹಿಡಿದಿರಬಹುದು ಎಂಬ ಸಂಶಯವಿರುವ ಪ್ರಾಣಿಗಳ ಕಡಿತ ಯಾ ಉಗುರುಗಳ ಗೀರು ದೇಹದಲ್ಲಿ ನಡೆದರೂ ತಕ್ಷಣ ಕಡ್ಡಾಯವಾಗಿ ರಾಬೀಸ್ ವಾಕ್ಸಿನ್(ಎ.ಆರ್.ವಿ.) ಪಡೆಯಬೇಕು. ಸಮಾಜ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆ, ಜನರಲ್ ಆಸ್ಪತ್ರೆಗಳಲ್ಲಿ ಈ ಚುಚ್ಚುಮದ್ದು ಉಚಿತವಾಗಿ ಲಭ್ಯವಿದೆ. 4 ಡೋಸ್ ಚುಚ್ಚುಮದ್ದು ಈ ನಿಟ್ಟಿನಲ್ಲಿ ಪಡೆದುಕೊಳ್ಳಬೇಕು ಎಂದು ಅವರು ಹೇಳಿರುವರು.