ನವದೆಹಲಿ: ಶಾಂಘೈ ಸಹಕಾರ ಸಭೆಯಲ್ಲಿ ಜಮ್ಮು-ಕಾಶ್ಮೀರವನ್ನೊಳಗೊಂಡ ಪಾಕ್ ನಕ್ಷೆಯನ್ನು ಪ್ರದರ್ಶಿಸಿದ್ದನ್ನು ಪ್ರತಿಭಟಿಸಿ ಎನ್ಎಸ್ಎ ಅಜಿತ್ ದೋವಲ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ. ಸಭೆಯನ್ನು ಆಯೋಜಿಸಿದ್ದ ರಷ್ಯಾದ ಸಲಹೆ-ಸೂಚನೆಗಳನ್ನು ಧಿಕ್ಕರಿಸಿ ಪಾಕಿಸ್ತಾನ ವಿವಾದಾತ್ಮಕ ನಕ್ಷೆಯನ್ನು ಪ್ರದರ್ಶಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ, "ಪಾಕಿಸ್ತಾನದ ಎನ್ಎಸ್ಎ ಡಾ. ಮೊಯೀದ್ ಯೂಸೂಫ್ ಅವರು ಭಾಗಿಯಾಗಿದ್ದ ವರ್ಚ್ಯುಯಲ್ ಸಭೆಯ ಹಿಂಬದಿಯಲ್ಲಿ ಜಮ್ಮು-ಕಾಶ್ಮೀರ, ಗುಜರಾತ್ ನ ಜುನಾಗಢ್ ನ್ನೊಳಗೊಂಡ ನಕ್ಷೆಯನ್ನು ತೋರಿಸಲಾಗಿತ್ತು ಇದನ್ನು ಗಮನಿಸಿದ ಎನ್ಎಸ್ಎ ಅಜಿತ್ ದೋವಲ್ ಅವರು ಸಭೆಯನ್ನು ಬಹಿಷ್ಕರಿಸಿ ಹೊರನಡೆದಿದ್ದಾರೆ" ಎಂದು ತಿಳಿಸಿದ್ದಾರೆ.
ಈ ರೀತಿಯ ನಕ್ಷೆಯನ್ನು ತೋರಿಸುವ ಮೂಲಕ ಪಾಕಿಸ್ತಾನ ಅತಿಥೆಯ ರಾಷ್ಟ್ರದ ನಿಬಂಧನೆಗಳನ್ನು ಉಲ್ಲಂಘಿಸಿ ರಷ್ಯಾಗೆ ಅವಮಾನ ಮಾಡಿದೆ, ಈ ಬಗ್ಗೆ ರಷ್ಯಾ ಎನ್ಎಸ್ಎ ಜೊತೆ ಮಾತನಾಡಿ ಅಜಿತ್ ದೋವಲ್ ಅವರು ಸಭೆ ಬಹಿಷ್ಕರಿಸಿದ್ದಾರೆಂದು ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಆದರೆ ಪಾಕಿಸ್ತಾನದ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ತನ್ನ ಹೊಸ ರಾಜಕೀಯ ನಕ್ಷೆ ವಿಚಾರದಲ್ಲಿ ಎಸ್ ಸಿಒದಿಂದ ಸಂಪೂರ್ಣ ಒಪ್ಪಿಗೆ ಇತ್ತು ಎಂದು ಹೇಳಿದೆ.