ಮುಳ್ಳೇರಿಯ: ಆರ್ಲಪದವಿನಿಂದ ಕಡಂದೇಲು, ಗಿಳಿಯಾಲು ಮೂಲಕ, ಇತಿಹಾಸ ಪ್ರಸಿದ್ಧ ಜಾಂಬ್ರಿ ಗುಹೆಯನ್ನು ಸಂಪರ್ಕಿಸುವ ರಸ್ತೆ ಅರ್ಲಪದವಿನಿಂದ, 3.7 ಕಿಮೀ ದೂರದಲ್ಲಿ ಕವಲೊಡೆದು ಕೇರಳದ, ಕಿನ್ನಿಂಗಾರು ಮೂಲಕ ಮುಳ್ಳೇರಿಯವನ್ನು ಸಂಪರ್ಕಿಸುವ ಅತೀ ಹತ್ತಿರದ ಅಂತರರಾಜ್ಯ ರಸ್ತೆಯಾಗಿದೆ.
ಈ ರಸ್ತೆ ಶೋಚನೀಯ ಸ್ಥಿತಿಯಲ್ಲಿ ಇದ್ದರೂ, ಗಡಿನಾಡ ಜನರು ದಿನನಿತ್ಯ ತಮ್ಮ ಕೆಲಸ ಕಾರ್ಯಗಳಿಗಾಗಿ ಬಂದು ಹೋಗುವ ರಸ್ತೆ, ಇದಾಗಿರುತ್ತದೆ.
ಕೋವಿಡ್ 19, ದೇಶದೆಲ್ಲೆಡೆ ಪಸರಿಸಿದಾಗ, ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಕರ್ನಾಟಕ ಘನ ಸರ್ಕಾರ, ಕೇರಳ ರಾಜ್ಯದ ಕಿನ್ನಿಂಗಾರನ್ನು ಸಂಪರ್ಕಿಸುವ ಈ ರಸ್ತೆಗೆ ಅಂತರರಾಜ್ಯ ಗಡಿಯಲ್ಲಿ, ರಸ್ತೆಯ ಎರಡೂ ಕಡೆಗಳಲ್ಲಿ, ರಸ್ತೆಗೆ ಅಡ್ಡವಾಗಿ ಸುಮಾರು 5, 6 ಅಡಿ ಆಳದ ಕಂದಕಗಳನ್ನು ತೆಗೆದು ಅಂತರರಾಜ್ಯ ವಾಹನ ಸಂಚಾರವನ್ನು ಸಂಪೂರ್ಣವಾಗಿ, ಇದೇ ವರ್ಷದ ಮಾರ್ಚ್ ಅಂತ್ಯದಲ್ಲಿ ನಿಷೇಧಿಸಿ, ಬಂದ್ ಮಾಡಿತ್ತು. ಗಡಿನಾಡ ಜನರಿಗೆ, ಸಂಪರ್ಕವೇ ಕಡಿದುಹೋಗಿತ್ತು.
ಆದರೆ ಈಗ ಎಲ್ಲಾ ಅಂತರರಾಜ್ಯ ರಸ್ತೆಗಳು ವಾಹನ ಸಂಚಾರಕ್ಕೆ ಮುಕ್ತವಾಗಿ ತೆರೆದಿದ್ದರೂ ಈ ರಸ್ತೆ ಇನ್ನೂ ವಾಹನ ಸಂಚಾರಕ್ಕೆ ಮುಕ್ತಿ ಕಂಡಿಲ್ಲ. ಎರಡೂ ಕಡೆ ತೆಗೆದ ಕಂದಕಗಳು ಹಾಗೆಯೇ ಇವೆ. ಈ ರಸ್ತೆಯನ್ನೇ ಅವಲಂಬಿತವಾಗಿರುವ, ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಹಲವು ಜನರು, ವಾಹನಗಳಲ್ಲಿ ಪ್ರಯಾಣಿಸಲಾಗದೆ ಪರದಾಡುತ್ತಿದ್ದಾರೆ.ಈ ರಸ್ತೆಯ ಮೂಲಕ ಬರುವ ಎಷ್ಟೋ ಪ್ರಯಾಣಿಕರು, ಕಂದಕದ ವರೆಗೆ ಬಂದು, ಮುಂದೆ ಚಲಿಸಲಾಗದೆ,ಪ್ರೇಕ್ಷಣೀಯ ಸ್ಥಳವಾದ ಜಾಂಬ್ರಿ ಗುಹೆಯನ್ನು ವೀಕ್ಷಿಸಲಾಗದೆ, ಇಲಾಖೆಯನ್ನು ಶಪಿಸುತ್ತಾ ಹಿಂತಿರುಗುತ್ತಿದ್ದಾರೆ.
ಕಂದಕ ತೆಗೆಯುವಾಗ ಇದ್ದ ಕರ್ತವ್ಯಪ್ರಜ್ಞೆ, ಮುತುವರ್ಜಿ ಇಲಾಖೆಗೆ ಈಗ ಯಾಕಿಲ್ಲ? ಎಂದು ಜನರಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನ ಹರಿಸಿ ತೆಗೆದ ಕಂದಕಗಳನ್ನು ಮುಚ್ಚಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.
ಅಭಿಮತ: ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ, ದಿನನಿತ್ಯ ನಾವಾಡುವಂತೆ ಸರ್ಕಾರ ಜನಪರವಲ್ಲದೆ ತೀವ್ರ ಹಿನ್ನಡೆಯ ಉದಾಸೀನತೆಗೆ ಸ್ಮಾರಕವಾಗಿ ಕೋವಿಡ್ ಕಂದಕ ಉಳಿದುಬಿಡುವುದೇ ಎಂಬ ಶಂಕೆ ವ್ಯಕ್ತವಾಗಿದೆ. ಸಂಬಂಧಪಟ್ಟವರು ಶೀಘ್ರ ಕರ್ತವ್ಯ ಪ್ರಜ್ಞೆಯಿಂದ ಕ್ರಮ ಕೈಗೊಳ್ಳಬೇಕಿದೆ.
ಜಿ. ಮಹಾಬಲೇಶ್ವರ ಭಟ್
ಮಾಜಿ ಮಂಡಲ ಪಂಚಾಯತ್ ಪ್ರಧಾನರು, ಗಿಳಿಯಾಲು ಮನೆ,