ಕಾಸರಗೋಡು: ಕಾಸರಗೋಡು ಜಿಲ್ಲೆ ಹೈಟೆಕ್ ಆಗಿದೆ. ಇದಕ್ಕೆ ನಿದರ್ಶನವಾಗಿ ಮೀಸಲಾತಿ ವಾರ್ಡ್ ಗಳ ಚಿಟಿ ಎತ್ತುವಿಕೆ ಲೈವ್ ಆಗಿ ನಡೆದಿದೆ. ಈ ಮೂಲಕ ರಾಜ್ಯದಲ್ಲೇ ಪ್ರಥಮ ಬಾರಿ ಈ ಪ್ರಕ್ರಿಯೆ ಜರಗಿದೆ.
ತಾಂತ್ರಿಕ ನಿಪುಣತೆ, ಸದುದ್ದೇಶ, ರಾಜ್ಯಕ್ಕಾಗಿ ತುಡಿಯುವ ಮನಸ್ಸು ಇದ್ದರೆ ಯಾವ ಕಾರ್ಯಕ್ರಮವನ್ನೂ ಹೈಟೆಕ್ ಆಗಿ ನಡೆಸಲು ಸಾಧ್ಯ ಎಂಬುದು ಈ ಮೂಲಕ ಸಾಬೀತಾಗಿದೆ. ಈ ಮೂಲಕ ಮುಕ್ತ ಶ್ಲಾಘನೆಗೆ ಕಾಸರಗೋಡು ಜಿಲ್ಲಾಡಳಿತೆ ಭಾಜನವಾಗಿದೆ.
ಸ್ಥಳೀಯಾಡಳಿತ ಸಂಸ್ಥೇಗಳ ಚುನಾವಣೆಗೆ ಪೂರ್ವಭಾವಿಯಾಗಿ ನಡೆಸಲಾಗುವ ಮೀಸಲಾತಿ ವಾರ್ಡ್ ಗಳ ಆಯ್ಕೆಗೆ ಚೀಟಿ ಎತ್ತುವ ಕಾರ್ಯಕ್ರಮಕ್ಕಾಗಿ ಈ ಹೈಟೆಕ್ ಸೌಲಭ್ಯ ಬಳಸಲಾಗಿದೆ. ಕೋವಿಡ್ ಸೋಂಕಿನ ಸಾಮಾಜಿಕ ಸಂಪರ್ಕ ನಿಯಂತ್ರಣ ನಿಟ್ಟಿನಲ್ಲಿ ನಡೆಸಲಾದ ಕಟ್ಟುನಿಟ್ಟುಗಳ ಅಂಗವಾಗಿ ನಿಗದಿತ ಪ್ರತಿನಿಧಿಗಳ ಸಮಕ್ಷದಲ್ಲಿ ಈ ರೀತಿಯ ಕಾರ್ಯಕ್ರಮ ಕೈಗೊಳ್ಳುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆಶಯಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಬೆಂಬಲ ವ್ಯಕ್ತವಾಗಿದೆ.
ಕಾಸರಗೋಡು ಜಿಲ್ಲಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಈ ಕಾರ್ಯಕ್ರಮ ನಡೆದಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವ ವಹಿಸಿದ್ದರು. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಮಹಿಳೆ, ಪರಿಶಿಷ್ಟ ಜಾತಿ-ಪಂಗಡ ಮೀಸಲಾತಿ ವಾರ್ಡ್ ಗಳ ಆಯ್ಕೆ ಚಿಟಿ ಎತ್ತುವಿಕೆ ಪ್ರಕ್ರಿಯೆ ಆರಂಭಗೊಂಡಿದೆ. ವೀಡಿಯೋ ಕಾನ್ ಫೆರೆನ್ಸ್ ಮೂಲಕ ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ಈ ಪ್ರಕ್ರಿಯೆಯಯನ್ನು ವೀಕ್ಷಿಸುವ ಸೌಲಭ್ಯ ಏರ್ಪಡಿಸಲಾಗಿದೆ. ರಾಜಕೀಯ ಪಕ್ಷಗಳ ಜಿಲ್ಲಾ ಸಮಿತಿ ಪ್ರತಿನಿಧಿಗಳು, ಆಯ್ದ ಸಿಬ್ಬಂದಿ ಮಾತ್ರ ಪ್ರತ್ಯಕ್ಷವಾಗಿ ಭಾಗವಹಿಸಿದ್ದರು.
ಸುಧಾರಿತ ರೀತಿ, ಯಾವ ಆಕ್ಷೇಪಕ್ಕೂ ಕಾರಣವಾಗದೆ ಮೊದಲ ದಿನ(ಸೋಮವಾರ) ನಡೆದ ಚೀಟಿ ಎತ್ತುವಿಕೆ ಪ್ರಕ್ರಿಯೆ ಮೂಲಕ 19 ಗ್ರಾಮ ಪಂಚಾಯತ್ ಗಳ ಮೀಸಲಾತಿ ವಾರ್ಡ್ ಗಳ ಆಯ್ಕೆ ನಡೆದಿದೆ. ಸೆ.29ರಂದು ಉಳಿದ ಗ್ರಾಮ ಪಂಚಾಯತ್ ಗಳ ಮೀಸಲಾತಿ ವಾರ್ಡ್ ಗಳ ಆಯ್ಕೆಯ ಚೀಟಿ ಎತ್ತುವಿಕೆ ನಡೆಯಲಿದೆ. ಅ.5ರಂದು ಬ್ಲೋಕ್-ಜಿಲ್ಲಾ ಪಂಚಾಯತ್ ಗಳ ಮೀಸಲಾತಿ ವಾರ್ಡ್ ಗಳ ಆಯ್ಕೆಯ ಚಿಟಿ ಎತ್ತುವಿಕೆ ಜರುಗಲಿದೆ.
ಸಹಾಯಕ ಜಿಲ್ಲಾಧಿಕಾರಿಗಳಾದ ಕೆ.ರವಿಕುಮಾರ್, ಎ.ಕೆ.ರಮೇಂದ್ರನ್, ಪಂಚಾಯತ್ ಡೆಪ್ಯೂಟಿ ಡೈರೆಕ್ಟರ್ ಜೈಸನ್ ಮ್ಯಾಥ್ಯೂ, ಹಣಕಾಸು ಅಧಿಕಾರಿ ಕೆ.ಸತೀಶನ್ ಉಪಸ್ಥಿತರಿದ್ದರು.