ಕಾಸರಗೋಡು: ಜ್ಯುವೆಲ್ಲರಿ ಆರಂಭಿಸಲು ಹಲವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಅವರ ಮನೆಯಲ್ಲಿ ಚಂದೇರ ಠಾಣೆ ಪೊಲೀಸರು ತಪಾಸಣೆ ನಡೆಸಿದರು.
ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಲಭಿಸಿದ 12ದೂರುಗಳಿಗೆ ಸಂಬಂಧಿಸಿ ಏಳು ದೂರುಗಳ ಪ್ರಾಥಮಿಕ ವಿಚಾರಣೆ ಪೂರ್ತಿಗೊಳಿಸಿ ಕ್ರೈಂ ಬ್ರಾಂಚ್‍ಗೆ ಹಸ್ತಾಂತರಿಸಲಾಗಿದೆ. ಉಳಿದ ಐದು ಕೇಸುಗಳ ವಿಚಾರಣೆಯನ್ನು ಚಂದೇರ ಠಾಣೆ ಪೊಲೀಸರು ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮನೆ ತಪಾಸಣೆ ನಡೆಸಲಾಗಿದೆ. ಜ್ಯುವೆಲ್ಲರಿ ಅಧ್ಯಕ್ಷ, ಶಾಸಕ ಎಂ.ಸಿ ಕಮರುದ್ದೀನ್ ಅವರ ಪಡನ್ನ ಎಡಚ್ಚಕೈಯಲ್ಲಿರುವ ಮನೆ ಹಾಗೂ ಇನ್ನೊಬ್ಬ ನಿರ್ದೇಶಕ ಪೂಕೋಯ ತಙಳ್ ಅವರ ಚಂದೇರ ಪೊಲೀಸ್ ಠಾಣೆ ಸನಿಹದ ಮನೆಯಲ್ಲಿ ಈ ತಪಾಸಣೆ ನಡೆಸಲಾಗಿದೆ. ಚಂದೇರ ಸಿ.ಐ ವಿ.ನಾರಾಯಣನ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮಹತ್ವದ ದಾಖಲೆಗಳ್ಯಾವುದೂ ಪತ್ತೆಯಾಗಿರಲಿಲ್ಲ. ಹಣ ಠೇವಣಿ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಎಂ.ಸಿ ಕಮರುದ್ದೀನ್ ಅವರ ವಿರುದ್ಧ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇವೆಲ್ಲವನ್ನೂ ಒಂದಾಗಿ ಪರಿಗಣಿಸಿ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ.