!
ಕಾಸರಗೋಡು: ಟಾಟಾ ಸಮೂಹವು ರಾಜ್ಯದಲ್ಲಿ ಮೊದಲ ಬಾರಿಗೆ ಕಾಸರಗೋಡು ಪೆರಿಯದಲ್ಲಿ ನಿರ್ಮಿಸಿದ ಕೋವಿಡ್ ಆಸ್ಪತ್ರೆಯ ನಿರ್ಮಾಣ ಪೂರ್ಣಗೊಳಿಸಿ ಅದನ್ನು ಸರ್ಕಾರಕ್ಕೆ ಹಸ್ತಾಂತರಿಸಿದೆ. ಆದರೆ ಅದು ಕಾರ್ಯರೂಪಕ್ಕೆ ಬರಲು ಇನ್ನೂ ಕೆಲವಷ್ಟು ಕಾಲ ಕಾಯಬೇಕಾಗುತ್ತದೆ ಎಂದು ತಿಳಿದುಬಂದಿದೆ. ಆಸ್ಪತ್ರೆಯು ಸಂಪೂರ್ಣ ಕಾರ್ಯನಿರ್ವಹಿಸಲು ಕನಿಷ್ಠ 400 ಸಿಬ್ಬಂದಿ ಅಗತ್ಯವಿರುತ್ತದೆ ಎಂದು ಆರೋಗ್ಯ ಇಲಾಖೆ ಅಂದಾಜಿಸಿದೆ. ಈಗಿರುವ ಕಟ್ಟಡದಲ್ಲಿ ಆಸ್ಪತ್ರೆಗೆ ಯಾವುದೇ ವೈದ್ಯಕೀಯ ಸೌಲಭ್ಯಗಳಿಲ್ಲ.
ರೋಗಿಗಳನ್ನು ದಾಖಲಿಸಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರವು ಆತುರದಿಂದ ಟಾಟಾ ಕಟ್ಟಡವನ್ನು ಉದ್ಘಾಟಿಸಿ ಕಟ್ಟಡವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದೇ ಹೊರತು ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಸ್ಪತ್ರೆಯಲ್ಲಿ ವೈದ್ಯರಿಂದ ಕ್ಲೀನರ್‍ಗಳವರೆಗೆ 400 ಕ್ಕೂ ಹೆಚ್ಚು ಸಿಬ್ಬಂದಿ ಅಗತ್ಯವಿದೆ. ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೆ ಅರ್ಧದಲ್ಲಿ ಮೊಟಕುಗೊಂಡಿರುವುದಾಗಿ ತಿಳಿದುಬಂದಿದೆ. ಡಿಎಂಒ ಆರೋಗ್ಯ ಕಾರ್ಯದರ್ಶಿಗೆ 400 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಪೇಕ್ಷಿಸಿ ವರದಿ ನೀಡಿ ಮನವಿ ಮಾಡಿದ್ದರು. ಐದು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಕಟ್ಟಡಕ್ಕೆ ಹೆಚ್ಚಿನ ಸಿಬ್ಬಂದಿ ಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಸ್ತುತ, ಟಾಟಾ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯಗಳು ಮಾತ್ರ ಇವೆ. ಆಸ್ಪತ್ರೆಗೆ 550 ಹಾಸಿಗೆಗಳನ್ನು ಸರ್ಕಾರ ಒದಗಿಸಬೇಕಾಗಿದೆ. ಸರ್ಕಾರದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊಸ ಹುದ್ದೆಗಳಿಗೆ ಅವಕಾಶ ನೀಡಲಾಗುತ್ತದೆಯೇ ಎಂಬ ಬಗ್ಗೆಯೂ ಸ್ಪಷ್ಟವಾಗಿಲ್ಲ. ಜೊತೆಗೆ ಕೋವಿದ್ ವೈದ್ಯಕೀಯ ಕಾಲೇಜಾಗಿ ಪರಿವರ್ತನೆಗೊಂಡ ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುಮಾರು 300 ಹುದ್ದೆಗಳನ್ನು ನೇಮಿಸಿಕೊಳ್ಳಲು ತಿಂಗಳುಗಳೇ ಹಿಡಿದಿದ್ದವೆಂಬ ಅಂಶವನ್ನೂ ಗಮನಿಸುವ ಅಗತ್ಯವಿದೆ.
ಚಿಕಿತ್ಸೆ ಪ್ರಾರಂಭವಾದ ಬಳಿಕ ಸಿಬ್ಬಂದಿ ಲಭ್ಯತೆಯ ಕೊರತೆಯ ಬಗೆಗೂ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಹಾಸಿಗೆಗಳು ಸೇರಿದಂತೆ ವಸ್ತುಗಳಿಗೆ ಟೆಂಡರ್ ಕರೆಯಲಾಗಿದೆ. ಏತನ್ಮಧ್ಯೆ, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ ಡಾ.ವಿ.ರಾಮದಾಸ್ ತಿಳಿಸಿದ್ದಾರೆ.