ಕಾಸರಗೋಡು: ಜಗದೋದ್ಧಾರಕ ಶ್ರೀ ಕೃಷ್ಣನ ಸಂದೇಶ ಸಾರ್ವಕಾಲಿಕವಾದುದು. ವಿಶ್ವದೆಲ್ಲೆಡೆ ಶ್ರೀಕೃಷ್ಣನನ್ನು ಆರಾಧಿಸಲಾಗುತ್ತಿದೆ. ಕೃಷ್ಣನ ಪ್ರತಿಯೊಂದು ಬಾಲಲೀಲೆಗಳು, ಪವಾಡಗಳು ಎಲ್ಲವೂ ಅವಿಸ್ಮರಣೀಯವಾದುದು. ಕೃಷ್ಣ ನೀಡಿರುವ ಪ್ರತಿಯೊಂದು ಸಂದೇಶ ಮನೆ ಮನೆಯಲ್ಲೂ ಪಾಲಿಸುವಂತಾಗಬೇಕು. ಈ ಮೂಲಕ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳಬಹುದೆಂದು ಸಾಮಾಜಿಕ ಕಾರ್ಯಕರ್ತ, ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಸದಾನಂದ ರೈ ಅವರು ಹೇಳಿದರು.
ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಗುರುವಾರ ಆಯೋಜಿಸಿದ 18 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಹಾಗು 9 ನೇ ವರ್ಷದ ಕಾಸರಗೋಡು ಜಿಲ್ಲಾ ಮಟ್ಟದ ಶ್ರೀಕೃಷ್ಣ ವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಯಮಿ ರಾಂ ಪ್ರಸಾದ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀ ರಾಮನಾಥ ದೇವಸ್ಥಾನದ ಪ್ರತಿನಿಧಿಯಾಗಿ ಹರೀಶ್ಚಂದ್ರ ಸೂರ್ಲು ಉಪಸ್ಥಿತರಿದ್ದರು. ಕರೊನಾ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಕಂದ ಕೃಷ್ಣ, ಮುದ್ದು ಕೃಷ್ಣ ಹಾಗು ಶ್ರೀಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕರೊನಾ ನಿಬಂಧನೆಗಳಂತೆ ನಡೆಸಲಾಯಿತು.
ಸಂಘಟಕ ಜಗದೀಶ್ ಕೂಡ್ಲು ಅವರು ಸ್ವಾಗತಿಸಿ, ರಾಮನಾಥ ಸಾಂಸ್ಕøತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ತೃಶಾ ಪ್ರಾರ್ಥನೆ ಹಾಡಿದರು. ದಿವಾಕರ ಅಶೋಕನಗರ ಮತ್ತು ಕಾವ್ಯ ಕುಶಲ ಶ್ರೀ ಕೃಷ್ಣನ ಭಕ್ತಿಗೀತೆಗಳನ್ನು ಹಾಡಿದರು.