ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಪರಿಣಾಮ ಈ ಬಾರಿ ಸಂಸತ್ ಅಧಿವೇಶನಕ್ಕೂ ಮುನ್ನ ನಡೆಯುವ ಸರ್ವಪಕ್ಷ ಸಬೆ ನಡೆಯುವುದಿಲ್ಲ ಎಂದು ಭಾನುವಾರ ತಿಳಿದುಬಂದಿದೆ.
ಸಾಮಾನ್ಯವಾಗಿ ಸಂಸತ್ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಸರ್ವಪಕ್ಷ ನಾಯಕರ ಜೊತೆ ಸಭೆ ನಡೆಸಿ ಚರ್ಚಿಸಬೇಕಾದ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಆದರೆ, ಈ ಬಾರಿ ಕೊರೋನಾ ವೈರಸ್ ಕಾರಣದಿಂದಾಗಿ ಅಧಿವೇಶನಕ್ಕೂ ಮುನ್ನು ಸರ್ವಪಕ್ಷ ಸಭೆ ಕರೆಯಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಸೋಮವಾರದಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದ ವೇಳೆ ಕೊರೋನಾ ಬಿಕ್ಕಟ್ಟು, ಆರ್ಥಿಕತೆಗೆ ಬಿದ್ದಿರುವ ಹೊಡೆತ, ಉದ್ಯೋಗ, ಕುಸಿತ, ಚೀನಾ ಗಡಿ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಆದರೆ, ಪ್ರಸಕ್ತ ಅಧಿವೇಶನದಲ್ಲಿ ಚೀನಾ ಗಡಿ ಬಿಕ್ಕಟ್ಟು ಕುರಿತ ವಿಚಾರ ಸರ್ಕಾರ ಚರ್ಚೆಗೆ ಪರಿಗಣಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.
ಭಾರತ ಮತ್ತು ಚೀನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೆಲವು ಸೂಕ್ಷ್ಮ ವಿಚಾರಗಳು ಅಡಗಿವೆ. ಅಲ್ಲದೆ, ಇದೊಂದು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಸಂಬಂಧಿಸಿ ವಿಚಾರವಾಗಿದ್ದರಿಂದ ಸಂಸತ್ತಿನಲ್ಲಿ ಬಹಿರಂಗವಾಗಿ ಚರ್ಚಿಸುವುದು ಸಾಧ್ಯವಿಲ್ಲ. ಹೀಗಾಗಿ ಗಡಿಯಲ್ಲಿನ ಇದೂವರೆಗಿನ ಬೆಳವಣಿಗೆ ಕುರಿತು ಚರ್ಚೆಯ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.