ಕಾಸರಗೋಡು: ನಾಡೊಂದರ ಪುನಶ್ಚೇತನಕ್ಕೆ ಸ್ಪಷ್ಟ ಮಾದರಿಯಾಗಿ ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಹೊರಹೊಮ್ಮಿದೆ.
ಆರೋಗ್ಯ ವಲಯದಲ್ಲಿ ಉತ್ತಮ ಸಾಧನೆ ನಡೆಸಿರುವ ಈ ಗ್ರಾಮಪಂಚಾಯತ್ ಕಳೆದ 5 ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆಸಿದ ಚಟುವಟಿಕೆಗಳು ಗಮನಾರ್ಹವಾಗಿದೆ. ಪ್ರಾಥಮಿಕ ಪಾಲಿಯೇಟಿವ್ ಕೇರ್ ಚಟುವಟಿಕೆಗಳು ಸಹಿತ ಆರೋಗ್ಯ ಪ್ರಕ್ರಿಯೆಗಳು ಕೋವಿಡ್ ಅವಧಿಯಲ್ಲೂ ಮೊಟಕಿಲ್ಲದೆ ಮುಂದುವರಿಯುತ್ತಿದೆ. ಎರಡು ಆಯುರ್ವೇದ ಆಸ್ಪತ್ರೆಗಳು, ಒಂದು ಹೋಮಿಯೋಪತಿ ಆಸ್ಪತ್ರೆ, 6 ಸಬ್ ಸೆಂಟರ್ ಗಳ ಮೂಲಕ ರಾಜ್ಯ ಸರಕಾರದ "ಆದ್ರರ್ಂ" ಯೋಜನೆಯ ಸೇವೆಗಳು ಜನತೆಗೆ ತಲಪುತ್ತಿವೆ.
ಜೀವನ ಶೈಲಿ ರೋಗಗಳಿಂದ ಜನತೆಯನ್ನು ಪಾರುಮಾಡುವ ನಿಟ್ಟಿನಲ್ಲಿ ಸೂಕ್ತ ಶುಶ್ರೂಷೆ, ಸಲಹೆ-ಸೂಚನೆಗಳನ್ನು ಯಥಾವತ್ತಾಗಿ ನೀಡುವಲ್ಲಿ ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಮುಂಚೂಣಿಯಲ್ಲಿದೆ. ಯೋಜನೆಯ ಮೂಲಕದ ಗಮನಾರ್ಹ ಸಾಧನೆಗಾಗಿ 2018-29ಬೇ ವರ್ಷದ ಜಿಲ್ಲಾ ಮಟ್ಟದ ಆದ್ರರ್ಂ ಪ್ರಶಶ್ತಿ ಈ ಪಂಚಾಯತ್ ಗೆ ಲಭಿಸಿದೆ. 5 ಲಕ್ಷ ರೂ. ಮತ್ತು ಅರ್ಹತಾಪತ್ರವನ್ನು ಈ ಪ್ರಶಸ್ತಿ ಹೊಂದಿದೆ.
ಪಾಲಿಯೇಟಿವ್ (ವಿದ್) ಕೇರ್:
ಗ್ರಾಮ ಪಂಚಾಯತ್ ನಲ್ಲಿ ಒಟ್ಟು ನೋಂದಣಿ ನಡೆಸಿರುವ ರೋಗಿಗಳ ಸಂಖ್ಯೆ 1310. ಹೋಂ ಕೇರ್ ಅಗತ್ಯವಿರುವ ರೋಗಿಗಳು ಒಟ್ಟು 170. ಈಗಿರುವ ರೋಗಿಗಳು 610. ತಿಂಗಳಲ್ಲಿ 16 ಹೋಂ ಕೇರ್, ಫಿಝಿಯೋ ಥೆರಪಿ ಹೋಂ ಕೇರ್, ಸೆಕೆಂಡರಿ ಹೋಂ ಕೇರ್ ಮೊದಲ ಹಂತದಲ್ಲೂ ನೀಡಲಾಗುತ್ತದೆ. ಅಗತ್ಯವಿರುವ ವೇಳೆ ವೈದ್ಯರೂ ಹೋಂ ಕೇರ್ ನಡೆಸುತ್ತಿದ್ದಾರೆ.
ಪಾಲಿಯೇಟಿವ್ ರೋಗಿಗಳಿಗಾಗಿ ಮಾತ್ರ ತಿಂಗಳಲ್ಲಿ 4 ಪ್ರತ್ಯೇಕ ಒ.ಪಿ.ಗಳು ಚಟುವಟಿಕೆ ನಡೆಸುತ್ತವೆ. ಇತರ ಅಗತ್ಯ ಸಾಮಾಗ್ರಿಗಳಾಗಿರುವ ಗಾಲಿ ಕುರ್ಚಿ, ವಾಕರ್. ವಾಟರ್ ಬೆಡ್, ಏರ್ ಬೆಡ್, ವಾಕಿಂಗ್ ಸ್ಟಿಕ್ ಇತ್ಯಾದಿ ಖರೀದಿಗೆ ಪ್ರತಿತಿಂಗಳು200 ರೋಗಿಗಳು ಒ.ಪಿ.ಗೆ ಬರುತ್ತಿದ್ದಾರೆ. ಡಯಾಲಿಸಿಸ್ ರೋಗಿಗಳಿಗೆ ಔಷಧ, ಚುಚ್ಚುಮದ್ದು ನೀಡಲಾಗುತ್ತಿದೆ. ಇಗ 14 ಡಯಾಲಿಸಿಸ್ ರೋಗಿಗಳು, ಕಿಡ್ನಿ ಬದಲಿಸಿ ಇರಿಸಲಾದ 6 ಮಂದಿ, ಕ್ಯಾನ್ಸರ್ ರೋಗಿಗಳಾದ 130 ಮಂದಿ, ಸೊಂಟದಿಂದ ಕೆಳಗೆ ಬಲ ಕಳೆದುಕೊಂಡಿರುವ 20 ಮಂದಿ ಪಾಲಿಯೇಟಿವ್ ಸೌಲಭ್ಯ ಬಳಸುತ್ತಿದ್ದಾರೆ.
ಗ್ರಾಮ ಪಂಚಾಯತ್ ನ ನೇತೃಥ್ವದಲ್ಲಿ ಪ್ರೈಮರಿ ಪಾಲಿಯೇಟಿವ್ ಕೇರ್ ಚಟುವಟಿಕೆಗಳಿಗಾಗಿ 60 ಮಂದಿ ಸ್ವಯಂಸೇವಕರಿಗೆ ತರಬೇತಿ ನೀಡಲಾಗಿದ್ದು, ಅವರಿಗೆ ಗುರುತುಚೀಟಿ ವಿತರಣೆ ಮಾಡಲಾಗಿದೆ. ಹೋಂ ಕೇರ್ ತಂಡಕ್ಕೆ ಸಹಾಯ ಒದಗಿಸುವುದು ಇವರ ಪ್ರಧಾನ ಹೊಣೆಗಾರಿಕೆ. 20 ಮಂದಿ ಆಶಾ ಕಾರ್ಯಕರ್ತೆಯರು ಇಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ.
ಅತಿಜೀವನಂ ಯೋಜನೆ ಮೂಲಕ ಪಾಲಿಯೇಟಿವ್ ರೋಗಿಗಳಿಗೆ, ಅವರ ಮನೆಮಂದಿಗೆ ಪುನಶ್ಚೇತನ ನಿಟ್ಟಿನಲ್ಲಿ ನೌಕರಿ ತರಬೇತಿ ನೀಡಲಾಗುತ್ತಿದೆ. ಸಾಬೂನು ಪೆಟ್ಟಿಗೆ, ಫಿನಾಯಿಲ್, ಕಾಗದದ ಪೆನ್, ಔಷಧದ ಲಕೋಟೆ ಇತ್ಯಾದಿ ತಯಾರಿಸುವ ತರಬೇತಿ ನೀಡಲಾಗುತ್ತಿದೆ. ಪ್ರತಿ ಮಂಗಳವಾರ ಪಾಲಿಯೇಟಿವ್ ಒ.ಪಿ. ಚಟುವಟಿಕೆ ನಡೆಸುತ್ತಿದೆ. ಜನವರಿ 1ರಂದು ಪಿಲಿಯೇಟಿವ್ ದಿನಾಚರಣೆ ಅಂಗವಾಗಿ ರೋಗಿಗಳಿಗೆ ಕಿಟ್ ವಿತರಣೆ, ಮಾನಸಿಕ ಉಲ್ಲಾಸಕ್ಕಾಗಿ ಕಲಾ ಕಾರ್ಯಕ್ರಮ ನಡೆಸಲಾಗುತ್ತಿದೆ.
ವಯೋವೃದ್ಧರಿಗೆ ಸಹಾಯ:
ವಯೋವೃದ್ಧರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲೂ ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಮಾದರಿಯಾಗಿದೆ. ವಯೋಜನ ಕ್ಲಬ್ ಗಳನ್ನು ಇಲ್ಲಿ ರಚಿಸಿ, ಪ್ರತಿತಿಂಗಳು ವೃದ್ಧರ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದೆ. ಹಿರಿಯ ಪ್ರಜೆಗಳಿಗೆ ಅಗತ್ಯವಿರುವ ವ್ಯಾಯಾಮ, ಆಹಾರ ಕ್ರಮ ಇತ್ಯಾದಿಗಳ ಕುರಿತು ತರಗತಿ ನೀಡಲಾಗುತ್ತದೆ. ಮಾನಸಿಕ ಉಲ್ಲಾಸಕ್ಕಾಗಿ ಕಲಾಕಾರ್ಯಕ್ರಮ ನಡೆಸಲಾಗುತ್ತಿದೆ.
ಇದರೊಂದಿಗೆ ತಾಯಿಯ ಗರ್ಭದಲ್ಲಿರುವ ಶಿಶುವಿನ ಹೃದಯ ಬಡಿತ ತಪಾಸಣೆಗಾಗಿ ಉಪಕರಣವನ್ನು ಗ್ರಾಮ ಪಂಚಾಯತ್ ಮಟ್ಟದ ಎಲ್ಲ ಸಬ್ ಸೆಂಟರ್ ಗಳಿಗೆ ಒದಗಿಸಲಾಗಿದೆ. ಸಿಹಿಮೂತ್ರ ರೋಗ, ರಕ್ತದೊತ್ತಡ ತಪಾಸಣೆ ಉಪಕರಣಗಳನ್ನು ಸಬ್ ಸೆಂಟರ್ಗಳಿಗೆ ವಿತರಿಸಲಾಗಿದೆ. ಆರೋಗ್ಯ ವಲಯದ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ಜಿಲ್ಲಾ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಂಗೀಕಾರ ಪಡೆದಿದೆ.