ನವದೆಹಲಿ: ಆಂಧ್ರ ಪ್ರದೇಶದ ಎಲ್ಲ ಸರ್ಕಾರಿ ಶಾಲೆಗಳನ್ನೂ ಇಂಗ್ಲಿಷ್ ಮೀಡಿಯಂ ಶಾಲೆಗಳಾಗಿ ಪರಿವರ್ತಿಸುವ ಸಂಬಂಧ ಜಗನ್ ಮೋಹನ್ ರೆಡ್ಡಿ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಜಗನ್ ಮೋಹನ್ ರೆಡ್ಡಿ ಸರ್ಕಾರ 1ರಿಂದ 6ನೇ ತರಗತಿವರೆಗಿನ ಎಲ್ಲ ತೆಲುಗು ಮಾಧ್ಯಮದ
ಶಾಲೆಗಳನ್ನೂ ಆಂಗ್ಲ ಮಾಧ್ಯಮದ ಶಾಲೆಗಳಾಗಿ ರೂಪಿಸಲು ಮುಂದಾಗಿತ್ತು. ಆದದೆ ಇದನ್ನು
ಪ್ರಶ್ನಿಸಿ ಎಲೂರು ಮೂಲದ ಡಾ. ಶ್ರೀನಿವಾಸ ಗುಂಟಪಲ್ಲಿ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಆಂಧ್ರ ಸರ್ಕಾರ ಆದೇಶಗಳನ್ನು ವಜಾಗೊಳಿಸಿತ್ತು. ಇದೀಗ ಜಗನ್ ಸರ್ಕಾರ ಸುಪ್ರೀಂ ಮೆಟ್ಟಿಲೇರಿದೆ.
ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರನ್ನೊಳಗೊಂಡ ಸುಪ್ರೀಂ ಪೀಠ, ಶ್ರೀನಿವಾಸ್ ಗುಂಟಿಪಲ್ಲಿ ಅವರಿಗೆ ಪತ್ರಿಕ್ರಿಯೆ ಸಲ್ಲಿಸುವಂತೆ ನೋಟಿಸ್ ನೀಡಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಜಗನ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ ವಿ ವಿಶ್ವನಾಥನ್ ಅವರು, ಆಂಧ್ರ ಪ್ರದೇಶ ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದಾರೆ.
ಬಹುಪಾಲು ಪೋಷಕರು ಇಂಗ್ಲಿಷ್ ಶಿಕ್ಷಣ ಮಾಧ್ಯಮವಾಗಬೇಕೆಂದು ಬಯಸಿದ್ದರು ಮತ್ತು ಇದು ಸಂವಿಧಾನದ ಪ್ರಕಾರ ಪ್ರಗತಿಪರ ವಿಚಾರವಾಗಿದೆ ಎಂದು ಅವರು ಹೇಳಿದರು.