ಕಾಸರಗೋಡು: ಕಯ್ಯೂರು-ಚೀಮೇನಿ ಪಂಚಾಯತ್ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುವ ಬಡ್ಸ್ ಶಾಲೆ ಇನ್ನು ಮುಂದೆ ಮಾದರಿ ಶಿಶು ಪುನರ್ವಸತಿ ಕೇಂದ್ರವಾಗಿ ಘೋಷಣೆಗೊಂಡಿದೆ.
ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಈ ಸಂಸ್ಥೆಯನ್ನು ಮಾದರಿ ಶಿಶು ಪುನರ್ವಸತಿ ಕೇಂದ್ರ ಎಂಬುದಾಗಿ ಘೋಷಿಸಿದರು. ಈ ಮೂಲಕ ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ಮಾತ್ರವಲ್ಲದೆ ಆಸುಪಾಸಿನ ಮಕ್ಕಳಿಗೂ ಅತ್ಯುತ್ತಮ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದು ಸಚಿವೆ ಈ ಸಂದರ್ಭ ತಿಳಿಸಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ರಾಜ್ಯ ಸಮಾಜ ಸುರಕ್ಷಾ ಮಿಷನ್ ಕಾರ್ಯಕಾರಿ ನಿರ್ದೇಶಕ ಡಾ.ಬಿ.ಮುಹಮ್ಮದ್ ಅಷೀಲ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮೊದಲಾದವರು ಆನ್ ಲೈನ್ ಮೂಲಕ ಭಾಗವಹಿಸಿದ್ದರು. ವಿವಿಧ ಗಣ್ಯರು ಉಪಸ್ಥಿತರಿದ್ದರು.
ಎಂಡೋಸಲ್ಫಾನ್ ಸಂತ್ರಸ್ತ ಮಕ್ಕಳಿಗಿರುವ ವಿಶೇಷ ಶಾಲೆಗಳಾಗಿರುವ ಬಡ್ಸ್ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನಡೆಸುವ ಚಟುಟವಿಕೆಗಳ ಅಂಗವಾಗಿ ಈ ಕೇಂದ್ರವನ್ನು ಮಾದರಿ ಕೇಂದ್ರವಾಗಿ ಬಡ್ತಿಗೊಳಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ಮೂಲಕ 5ನೇ ಬಡ್ಸ್ ಶಾಲೆ ಈ ಮೂಲಕ ಬಡ್ತಿ ಪಡೆದಿದೆ. ಇಲ್ಲಿ ಇನ್ನು ಮುಂದೆ ವಿಶೇಷಚೇತನ ಮಕ್ಕಳಿಗೆ ಥೆರೆಪಿಗಳ ಸಹಿತ ವಿವಿಧ ಸೇವೆಗಳು ಲಭಿಸಲಿವೆ. ಇದಕ್ಕೆ ಪೂರಕವಾದ ಬೌತಿಕ ಸೌಲಭ್ಯಗಳನ್ನು, ಉಪಕರಣಗಳನ್ನೂ ಸಮಾಜ ಸುರಕ್ಷಾ ಮಿಷನ್ ಒದಗಿಸಿದೆ.