ಮಂಜೇಶ್ವರ: ಮುದ್ದು ಕಂದಮ್ಮರಿಗೆ ಪ್ರತಿ ತಿಂಗಳು ಮತ್ತು ವರ್ಷಗಳಿಗೊಮ್ಮೆ ನೀಡಲಾಗುವ ಚುಚ್ಚು ಮದ್ದು ನೀಡಲು ಕಂದಮ್ಮರ ತಾಯಂದಿರು ಕೋವಿಡ್ ಟೆಸ್ಟ್ ನಡೆಸಬೇಕೆಂಬ ವಿವಾದಾತ್ಮಕ ಹೇಳಿಕೆ ಆಗಮಿಸಿದ ಅಮ್ಮಂದಿರನ್ನು ಸಂಕಷ್ಟಕ್ಕೀಡುಮಾಡಿತು. ಮಂಜೇಶ್ವರ ಆರೋಗ್ಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿಯ ಈ ಹೇಳಿಕೆಗೆ ಆಗಮಿಸಿದ ಬ್ಲಾಕ್ ಪಂ. ಹಾಗೂ ಗ್ರಾ. ಪಂ. ಜನಪ್ರತಿನಿಧಿಗಳು ವೈದ್ಯಾಧಿಕಾರಿ ವಿರುದ್ಧ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕೇರಳ ಗಡಿ ಪ್ರದೇಶವಾದ ಮಂಜೇಶ್ವರದಲ್ಲಿ ಅತಿ ಹೆಚ್ಚಿನ ಮಂದಿ ಆಶ್ರಯಿಸುತ್ತಿರುವ ಮಂಜೇಶ್ವರ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ .
ಕೋವಿಡ್ ವಿರುದ್ಧ ಎಲ್ಲರೂ ಒಂದಾಗಿ ಸಮರವನ್ನು ಸಾರಿರುವ ಸಂದರ್ಭ ಊರಿಗೆ ಶಾಪವಾದ ಈ ವೈದ್ಯಾಧಿಕಾರಿಯ ವಿರುದ್ಧ ವ್ಯಾಪಕವಾದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಚಿವರಿಗೂ , ಜಿಲ್ಲಾಧಿಕಾರಿಗೂ , ಹಾಗೂ ಜಿಲ್ಲಾ ವೈದ್ಯಾಧಿಕಾರಿಗೂ ದೂರುಗಳನ್ನು ನೀಡುತ್ತಾ ಬಂದಿರುವುದಾಗಿ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.
ಇತಿಹಾಸದಲ್ಲಿ ಆರೋಗ್ಯ ಇಲಾಖೆ ತಾಳತಪ್ಪಿರುವ ಈ ಕಾಲದಲ್ಲಿ ಕಂದಮ್ಮರಿಗೆ ತಿಂಗಳಿಗೆ ಹಾಗು ವರ್ಷಗಳಲ್ಲಿ ನೀಡಬೇಕಾದ ಅವರ ಅರ್ಹತೆಯ ಚುಚ್ಚು ಮದ್ದು ನೀಡುವಿಕೆ ಅಸ್ತವ್ಯಸ್ತಗೊಂಡಿರುವ ಸಮಯದಲ್ಲಿ ಬುಧವಾರ ಬೆಳಿಗ್ಗೆ ಎಂಟು ಗಂಟೆಯಿಂದಲೇ ಆಗಮಿಸಿದ ಸುಮಾರು ಎಂಬತ್ತಕ್ಕಿಂತಲೂ ಅಧಿಕ ಮಂದಿ ಅಮ್ಮಂದಿರು ತಮ್ಮ ಕಂದಮ್ಮಗಳ ಇಂಜಕ್ಷನ್ ಗಾಗಿ ಕಾಯುತ್ತಿರುವಾಗ ವೈದ್ಯಾಧಿಕಾರಿಯ ಹೊಸ ಆದೇಶ ಭಾರಿ ವಿವಾದಕ್ಕೆ ಕಾರಣವಾಯಿತು. ಯಾವುದೇ ಆಸ್ಪತ್ರೆಯಲ್ಲೂ ಇಲ್ಲದ ಕಾನೂನನ್ನು ಮಂಜೇಶ್ವರ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಜಯಾರಿಗೆ ತರಲು ಶ್ರಮ ನಡೆಸಿರುವುದು ಸಾರ್ವಜನಿಕವಲಯದಲ್ಲೂ ಭಾರಿ ಚರ್ಚೆಗೆ ಕಾರಣವಾಯಿತು.
ಆರೋಗ್ಯಾಧಿಕಾರಿಗೆ ಸಾಥ್ ನೀಡಿದ ಸ್ಟಾಫ್ ನರ್ಸ್ ಕೂಡಾ ಅಮ್ಮಂದಿರನ್ನು ಕೋವಿಡ್ ಟೆಸ್ಟ್ ನಡೆಸಲು ಪ್ರೇರೇಪಿಸಿರುವುದಾಗಿ ಆರೋಪವಿದೆ. ಈ ವೈದ್ಯಾಧಿಕಾರಿ ಆರಂಭದಿಂದಲೂ ಆಸ್ಪತ್ರೆಗೆ ತಲುಪುತ್ತಿರುವ ರೋಗಿಗಳನ್ನು ಸತಾಯಿಸುತ್ತಿರುವ ಬಗ್ಗೆ ಈಗಾಗಲೇ ಹಲವು ದೂರುಗಳು ಲಭಿಸಿರುವುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳು ತಿಳಿಸಿದರು. ಅತ್ಯಧಿಕ ಹೆರಿಗೆ, ದಾಖಲಾತಿ ಚಿಕಿತ್ಸೆ ಸೇರಿದಂತೆ ಹಲವಾರು ಸೌಕರ್ಯಗಳನ್ನು ಹೊಂದಿದ್ದ ಈ ಆಸ್ಪತ್ರೆ ಇದೀಗ ಕೆಲವು ವರ್ಷಗಳಿಂದ ಸೇವೆಯಲ್ಲಿರುವ ವೈದ್ಯಾಧಿಕಾರಿಯ ಅನಾಸ್ಥೆಯಿಂದ ಸರ್ವನಾಶವಾಗಿರುವುದಾಗಿ ಆರೋಪಿಸಲಾಗಿದೆ. ಜನಪ್ರತಿನಿಧಿಗಳ ಪ್ರತಿಭಟನೆಯ ತೀವೃತೆಗೆ ಕಂಗಾಲಾದ ವೈದ್ಯಾಧಿಕಾರಿ ಬಳಿಕ ಇಂಜಕ್ಷನ್ ನೀಡಲು ಅನುಮತಿ ನೀಡಿದ್ದಾಳೆ. ಕರ್ತವ್ಯ ನಿರ್ವಹಿಸದೆ ಸಂಬಳ ಉದ್ದೇಶವಾದರೆ ಅದು ಸಾಧ್ಯವಿಲ್ಲ. ಮಾತ್ರವಲ್ಲದೆ ಇಲ್ಲಿಯ ವೈದ್ಯರುಗಳು ಮಂಗಳೂರಿನಲ್ಲಿ ಡ್ಯೂಟಿ ನಡೆಸಿ ಹನ ಸಂಪಾದನೆ ಮಾಡಿ ಅಲ್ಲೇ ಪ್ಲಾಟಿನಲ್ಲಿ ಉಳಿದುಕೊಳ್ಳುವುದನ್ನು ತಡೆಯುವುದರ ಜೊತೆಗೆ ಇದಕ್ಕೆ ಕಡಿವಾಣಹಾಕಲು ಸಂಬಂಧಪಟ್ಟ ಸಚಿವರಿಗೆ ದೂರು ನೀಡುವುದಾಗಿ ಬ್ಲಾಕ್ ಪಂ. ಅಧ್ಯಕ್ಷ ಹೇಳಿದರು.
ಮಂಜೇಶ್ವರ ಬ್ಲಾಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ , ಜನಪ್ರತಿನಿಧಿಗಳಾದ ಮುಕ್ತಾರ್ , ಮುಸ್ತಫಾ, ಅಬ್ದುಲ್ಲಾ ಗುಡ್ಡಕ್ಕೇರಿ , ಅಬ್ದುಲ್ ರಹ್ಮಾನ್ ಹಾಜಿ , ಶಂಸಿನಾ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದರು.