ಕಾಸರಗೋಡು: ಕಾಸರಗೋಡು ಜಿಲ್ಲೆಯ ಮಲೆನಾಡ ಪ್ರದೇಶಗಳು ಕೋವಿಡ್ ಸೋಂಕಿನ ಹಾವಳಿಯಿಂದ ತತ್ತರಿಸುತ್ತಿರುವ ವೇಳೆ ಈ ಬಗ್ಗೆ ಜನಜಾಗೃತಿ ಮೂಡಿಸಿ, ಪ್ರತಿರೋಧ ಚಟುವಟಿಕೆ ನಡೆಸುವಲ್ಲಿ ಶಿಕ್ಷಕರ ವೃಂದವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಈಸ್ಟ್ ಏಳೇರಿ ಗ್ರಾಮ ಪಂಚಾಯತ್ ಇತರರಿಗೆ ಮಾದರಿಯಾಗಿದೆ.
ರೇಡಿಯೋ ಮಾಧ್ಯಮದ ಮೂಲಕವೂ ಜನಜಾಗೃತಿ ನಡೆಸಿ ಪ್ರತಿರೋಧ ಚಟುವಟಿಕೆಗಳಿಗೆ ಹೊಸರೂಪ ನೀಡಿರುವುದು ಮಾಸ್ಟರ್ ಯೋಜನೆಗೆ ದುಪ್ಪಟ್ಟು ಚುರುಕುತನ ನೀಡಿದೆ. ಈ ಮೂಲಕ ಗ್ರಾಮ ಪಂಚಾಯತ್ ನಾದ್ಯಂತ ಶಿಕ್ಷಕರು ಹದ್ದಿನ ಕಣ್ಣಿನೊಂದಿಗೆ ಹೊಣೆಗಾರಿಕೆಯಲ್ಲಿರುವರು.
ತಮ್ಮ ಚಟುವಟಿಕೆಯ ಮೊದಲ ಹಂತವಾಗಿ ಸಂಹಿತೆ ಉಲ್ಲಂಘಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಗುಂಪು ಸೇರಿದ, ಮಾಸ್ಕ್ ಧರಿಸದೇ ಇರುವ ಮಂದಿಯನ್ನು ಪತ್ತೆ ಮಾಡಿ ಅವರಿಗೆ ಜಾಗೃತಿ ಮೂಡಿಸುವ ಕಾಯಕವನ್ನು ಮಕ್ಕಳಿಗೆ ಪಾಠ ಮಾಡುವ ಅಧ್ಯಾಪಕರು ನಡೆಸಲಿದ್ದಾರೆ. ನಂತರವೂ ಆದೇಶ ಉಲ್ಲಂಘಿಸುವವರ ಬಗ್ಗೆ ಬಿಗಿಯಾಗಿ ಎಚ್ಚರಿಕೆ ನೀಡುವರು. ನಂತರವೂ ಮಾತು ಕೇಳದೇ ಇದ್ದವರ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಸುವರು.
ಕೋವಿಡ್ ಸೋಂಕು ಹರಡುವಿಕೆಯ ಮೊದಲ ಎರಡು ಹಂತಗಳಲ್ಲಿ ಈಸ್ಟ್ ಏಳೇರಿ ಗ್ರಾಮ ಪಂಚಾಯತ್ ನಲ್ಲಿ ರೋಗಬಾಧೆ ಕಡಿಮೆಯಿತ್ತು. ಮೂರನೇ ಹಂತದಲ್ಲಿ ರೋಗಿಗಳ ಗಣನೆ ಏಕಾಏಕಿ ಏರತೊಡಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಆಡಳಿತೆ ಸಮಿತಿ, ಪೆÇಲೀಸ್, ಆರೋಗ್ಯ ಇಲಾಖೆಗಳು, ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು, ವಾರ್ಡ್ ಮಟ್ಟದ ನೆರೆಕೂಟಗಳು ಸತತ ಜನಜಾಗೃತಿ ಮೂಡಿಸುವ ಯತ್ನ ನಡೆಸುತ್ತಿದ್ದಾರೆ. ಇದಕ್ಕೆ ಹೆಚ್ಚುವರಿ ಬಲ ನೀಡುವ ನಿಟ್ಟಿನಲ್ಲಿ ಮಾಸ್ಟರ್ ಯೋಜನೆ ಮೂಲಕ ಶಿಕ್ಷಕರ ಸಹಾಯ ಲಭಿಸಲಿದೆ. ಇದು ಪೂರ್ಣ ಪರಿಣಾಮ ನೀಡುವ ನಿರೀಕ್ಷೆಯಿದೆ ಎಂದು ಈಸ್ಟ್ ಏಳೇರಿ ನೋಡೆಲ್ ಅಧಿಕಾರಿ ಕೆ.ಸಿ.ಸೆಬಾಸ್ಟಿನ್ ತಿಳಿಸಿದರು.
ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗೆ ಶಿಕ್ಷಕರ ಸಹಕಾರ ಪಡೆಯುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಡಳಿತೆ ರಚಿಸಿರುವ ಯೋಜನೆಯೇ ಮಾಸ್ಟರ್. ಪ್ರತಿ ವಾರ್ಡ್ ಮಟ್ಟದ ಸ್ಥಿತಿ-ಗತಿ ಅವಲೋಕನ ನಡೆಸುವ ನಿಟ್ಟಿನಲ್ಲಿ, ಜಾಗೃತಿ ಮೂಡಿಸುವ ಉದ್ದೇಶದಿಂದ ಒಬ್ಬ ನೋಡೆಲ್ ಅಧಿಕಾರಿಯ ನೇಮಕ ನಡೆಯಲಿದೆ. ನೋಡೆಲ್ ಅಧಿಕಾರಿಯಾಗಿ ಹೊಣೆಹೊರುವ ಶಿಕ್ಷಕ ತಮ್ಮ ನಿವಾಸವಿರುವ ವಾರ್ಡ್ ಯಾ ಸಮೀಪದ ವಾರ್ಡ್ ನ ಹೊಣೆ ಹೊಂದಿರುತ್ತಾರೆ.
ರೇಡಿಯೋ ಸೌಲಭ್ಯ :
ಜನಜಾಗೃತಿ ನಿಟ್ಟಿನಲ್ಲಿ ಮಾಸ್ಟರ್ ಯೋಜನೆಗಾಗಿ ಮಾಸ್ಟರ್ ರೇಡಿಯೋದ ಚಟುವಟಿಕೆಯೂ ಈಸ್ಟ್ ಏಳೇರಿ ಗ್ರಾಮ ಪಂಚಾಯತ್ ನಲ್ಲಿ ಈಗಾಗಲೇ ಆರಂಭಗೊಂಡಿದೆ. ವಿವಿಧ ವಾಟ್ಸ್ ಆಪ್ ಗುಂಪುಗಳ ಮೂಲಕ, ಫೇಸ್ ಬುಕ್ ಮೂಲಕ ಸುದ್ದಿ ಬುಲೆಟಿನ್ ಪ್ರಸಾರಗೊಳ್ಳುತ್ತಿದ್ದು, ಈಗಾಗಲೇ ಇಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಕೇಳುಗರಿದ್ದಾರೆ. ಕೆ.ಸಿ.ಸೆಬಾಸ್ಟಿನ್, ಸಿಜೋ ಅರಯ್ಕಲ್ ಅವರ ನೇತೃತ್ವದಲ್ಲಿ ಇಲ್ಲಿ ಮಾಸ್ಟರ್ ಯೋಜನೆಯ ಚಟುವಟಿಕೆ ನಡೆಯುತ್ತಿದೆ. ಇವರೇ ಸುದ್ದಿ ಸಂಪಾದಕರೂ ಆಗಿದ್ದಾರೆ. ನೋಡೆಲ್ ಅಧಿಕಾರಿಗಳಿಂದ ಆರೋಗ್ಯ ಇಲಾಖೆಯಿಂದ, ಗ್ರಾಮ ಪಂಚಾಯತ್ ನಿಂದ ಮಾಹಿತಿ ಸಂಗ್ರಹಿಸಿ ಸುದ್ದಿ ಬುಲೆಟಿನ್ ತಯಾರಿಸಲಾಗುತ್ತಿದೆ.
ವಿದ್ಯಾರ್ಥಿಗಳ ಪಾಲುದಾರಿಕೆ:
ಮಾಸ್ಟರ್ ಯೋಜನೆ ಅಧ್ಯಾಪಕರದ್ದಾಗಿದ್ದರೂ, ವಿದ್ಯಾರ್ಥಿಗಳ ಪಾಲುದಾರಿಕೆಯೂ ಇಲ್ಲಿ ಸಕ್ರಿಯವಾಗಿದೆ. ಚಿತ್ತಾರಿಕಲ್ಲ್ ಸಂತ ಮೇರೀಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ರೋಷನ್ ಮೆರಿಯಾ ವಾರ್ತಾ ವಾಚಕಿಯಾಗಿದ್ದಾರೆ. ಈಕೆಯ ಸಹೋದರ 9ನೇ ತರಗತಿಯ ವಿದ್ಯಾರ್ಥಿ ರೋಯಸ್ ರೋಷನ್ ಬುಲೆಟಿನ್ ಎಡಿಟಿಂಗ್ ನಡೆಸುತ್ತಿದ್ದಾರೆ.
ದಿನಂಪ್ರತಿಯ ಕೋವಿಡ್ ಗಣನೆ, ಜಿಲ್ಲಾಡಳಿತೆ, ಗ್ರಾಮ ಪಂಚಾಯತ್ ನಡೆಸುತ್ತಿರುವ ಪ್ರತಿರೋಧ ಚಟುವಟಿಕೆಗಳು ಇತ್ಯಾದಿಗಳು ಪ್ರಧಾನ ವಿಷಯವಾಗಿರುತ್ತವೆ. ವಿಶೇಷವಾಗಿ ಆಂಟಿಜೆನ್ ಟೆಸ್ಟ್ ನ ಫಲಿತಾಂಶವನ್ನು ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರ ಮಾಡಲಾಗುತ್ತದೆ. ಜೊತೆಗೆ ಕೋವಿಡ್ ಅವಧಿಯಲ್ಲಿ ಕೈಗೊಳ್ಳಬೇಕಾದ ಜಾಗರೂಕತೆ, ಪಾಲಿಸಬೇಕಾದ ಸಂಹಿತೆಗಳು ಇತ್ಯಾದಿಯನ್ನೂ ತಿಳಿಸಲಾಗುತ್ತದೆ. ಪ್ರತಿದಿನ ರಾತ್ರಿ 8ರಿಂದ 9 ಗಂಟೆಯ ನಡುವಿನ ಅವಧಿಯಲ್ಲಿ ಈ ವಾರ್ತೆ ಪ್ರಸಾರಗೊಳ್ಳುತ್ತದೆ.
ಮಾಸ್ಟರ್ ರೇಡಿಯೋ ವಾರ್ತೆ ಆರಂಭಗೊಂಡ ದಿನವೇ ಈ ಯತ್ನಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.