ನವ ದೆಹಲಿ : ಕೊರೋನಾ ವೈರಸ್ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕಾರಣ ಭಾರತದ ಸೇರಿದಂತೆ ಅನೇಕ ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಗಳು ತನ್ನ ನೆಲದಲ್ಲಿ ಇಳಿಯಲು ಸೌದಿ ಅರೇಬಿಯಾ ಸರ್ಕಾರ ಇಂದಿನಿಂದ ನಿಷೇಧ ವಿಧಿಸಿದೆ. ಈ ಸಂಬಂಧ ಅಧಿಕೃತ ಪ್ರಕಟಣೆಯನ್ನೂ ಹೊರಡಿಸಿದೆ ಎನ್ನಲಾಗುತ್ತಿದೆ. ಪ್ರಕಟಣೆ ಹೊರಡಿಸಿರುವ ಸೌದಿ ಅರೇಬಿಯಾದ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ (ಜಿಎಸಿಎ) "ಭಾರತ, ಬ್ರಿಜಿಲ್ ಮತ್ತು ಅರ್ಜೆಂಟೀನಾ ದೇಶಗಳ ವಿಮಾನಗಳು ಸೌದಿ ಅರೇಬಿಯಾದಲ್ಲಿ ಇಳಿಯಲು ನಿಷೇಧ ವಿಧಿಸಲಾಗಿದೆ. ಈ ದೇಶಗಳಿಂದ ಸೌದಿ ಅರೇಬಿಯಾಗೆ ಬರುವ ಯಾವುದೇ ವ್ಯಕ್ತಿ ಇಲ್ಲಿ ಆಗಮಿಸುವ 14 ದಿನಗಳ ಮೊದಲೇ ಸೌದಿ ಆರೇಬಿಯಾ ವಿಮಾನಯಾನ ಸಚಿವಾಲಯಕ್ಕೆ ಮಾಹಿತಿ ನೀಡಬೇಕು" ಎಂದು ಸೂಚಿಸಲಾಗಿದೆ. ಆದಾಗ್ಯೂ ಸರ್ಕಾರದ ಅಧಿಕೃತ ಆಮಂತ್ರಣ ಹೊಂದಿರುವ ಪ್ರಯಾಣಿಕರಿಗೆ ಈ ಅಧಿಸೂಚನೆ ಅನ್ವಯವಾಗುವುದಿಲ್ಲ ಎಂದು ಸೌದಿ ಅರೇಬಿಯಾ ವಿಮಾನಯಾನ ಸಚಿವಾಲಯ ಸ್ಪಷ್ಟಪಡಿಸಿದೆ.
ಇದಲ್ಲದೆ ಜಿಎಸಿಎ ಸುತ್ತೋಲೆಯಲ್ಲಿ, “ಕೊರೋನಾ ವೈರಸ್ ಅಧಿಕವಾಗಿ ಹರಡಿರುವ ದೇಶಗಳಿಂದ ಮಾತ್ರ ಸೌದಿ ಅರೇಬಿಯಾಗೆ ವಿಮಾನ ಪ್ರಯಾಣವನ್ನು ಮುಂಜಾಗ್ರತಾ ಕ್ರಮವಾಗಿ ನಿಷೇಧಿಸಲಾಗಿದೆ. ಸೌದಿ ಅರೇಬಿಯಾ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಚಾರ್ಟರ್ಡ್ ಫ್ಲೈಟ್ ಕಂಪನಿಗಳು ಈ ನಿಮಯವನ್ನು ಚಾಚೂ ತಪ್ಪದೆ ಪಾಲಿಸಬೇಕು” ಎಂದು ಸೂಚನೆ ನೀಡಲಾಗಿದೆ. ಸೌದಿ ಅರೇಬಿಯಾ ಮತ್ತು ಯುಎಇ ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಭಾರತೀಯ ವಲಸಿಗರು ನೆಲೆಸಿದ್ದಾರೆ. ಈ ಹಿಂದೆ ಏರ್ ಇಂಡಿಯಾ ವಿಮಾನ ಆಗಸ್ಟ್ 28 ಮತ್ತು ಸೆಪ್ಟೆಂಬರ್ 4 ರಂದು COVID- ಪಾಸಿಟಿವ್ ಪ್ರಮಾಣಪತ್ರಗಳನ್ನು ಹೊಂದಿದ್ದ ಇಬ್ಬರು ಪ್ರಯಾಣಿಕರನ್ನು ಭಾರತದಿಂದ ಸೌದಿ ಅರೇಬಿಯಾಗೆ ಕರೆತಂದಿತ್ತು. ಹೀಗಾಗಿ ದುಬೈ ಸಿವಿಲ್ ಏವಿಯೇಷನ್ ಅಥಾರಿಟಿ (ಡಿಸಿಎಎ) ತನ್ನ ಎಲ್ಲಾ ವಿಮಾನಗಳನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಿತ್ತು. ಇದೇ ಕಾರಣಕ್ಕೆ ಸೌದಿ ಅರೇಬಿಯಾ ಭಾರತದ ವಿಮಾನಗಳನ್ನು ನಿಷೇಧಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
ಯುಎಇ ಸರ್ಕಾರದ ನಿಯಮಗಳ ಪ್ರಕಾರ, ಭಾರತದಿಂದ ಸೌದಿ ಅರೇಬಿಯಾಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕನು ಪ್ರಯಾಣಕ್ಕೆ 96 ಗಂಟೆಗಳ ಮೊದಲು ಮಾಡಿದ ಆರ್‌ಟಿ-ಪಿಸಿಆರ್ ಪರೀಕ್ಷೆಯ COVID 19- negative ಪ್ರಮಾಣಪತ್ರವನ್ನು ತರಬೇಕಾಗುತ್ತದೆ.COVID-19 Nagetive ಪ್ರಮಾಣ ಪತ್ರ ಹೊಂದಿದ್ದಾಗ್ಯೂ ಹಾಂಕಾಂಗ್ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಬೆಳಸಿದ್ದ ಇಬ್ಬರಿಗೆ ಅಲ್ಲಿ ಪರೀಕ್ಷೆ ಮಾಡಲಾಗಿ ಕೋವಿಡ್ ಧನಾತ್ಮಕವಾಗಿತ್ತು. ಹೀಗಾಗಿ ಹಾಂಕಾಂಗ್ ಸರ್ಕಾರ ಸಹ ಭಾನುವಾರದಿಂದ ಅಕ್ಟೋಬರ್ 3 ರವರೆಗೆ ಏರ್ ಇಂಡಿಯಾ ವಿಮಾನಗಳನ್ನು ನಿಷೇಧಿಸಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದರು.
ಕೊರೋನಾ ದೇಶದಾದ್ಯಂತ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಕಳೆದ ಮಾರ್ಚ್ 23 ರಿಂದ ಭಾರತ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿತ್ತು. ಆದರೆ, ವಿದೇಶದಲ್ಲಿ ಭಾರತೀಯರನ್ನು ರಕ್ಷಿಸಿ ವಾಪಾಸ್ ಭಾರತಕ್ಕೆ ಹಿಂದಿರುಗಿಸುವ ಸಲುವಾಗಿ ಮೇ.06 ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತದ ವಿಶೇಷ ವಿಮಾನ ಸೌದಿ ಅರೇಬಿಯಾದಿಂದ ಅನೇಕರನ್ನು ರಕ್ಷಿಸಿ ಕರೆತಂದಿದೆ. ಆದರೆ, ಕೊರೋನಾ ಮುಂಜಾಗ್ರತೆಯೊಂದಿಗೆ ವಿಮಾನ ಯಾನ ಕಾರ್ಯ ನಿರ್ವಹಿಸಲಿದೆ ಎಂದು ಭರವಸೆ ನೀಡಿದ್ದ ಭಾರತ ಸರ್ಕಾರ ಇತ್ತೀಚೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ, ಇದೀಗ ಸೌದಿ ಅರೇಬಿಯಾ ಮತ್ತು ಹಾಂಕಾಂಗ್ ಸರ್ಕಾರ ಏಕಾಏಕಿ ಭಾರತದ ವಿಮಾನಗಳು ತನ್ನ ನೆಲದಲ್ಲಿ ಇಳಿಯುವುದಕ್ಕೆ ತಗಾದೆ ತೆಗೆದಿರುವುದು ಏರ್ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಲಿದೆ ಎಂದೇ ಹೇಳಲಾಗುತ್ತಿದೆ.