ತಿರುವನಂತಪುರ: ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮಸೂದೆಗಳ ವಿರುದ್ಧ ಸುಪ್ರೀಂ ಕೋರ್ಟ್ ನ್ನು ಸಂಪರ್ಕಿಸಲು ರಾಜ್ಯ ಕ್ಯಾಬಿನೆಟ್ ಬುಧವಾರ ನಿರ್ಧರಿಸಿದೆ ಮತ್ತು ಇದಕ್ಕೂ ಮುನ್ನ ಸರ್ಕಾರ ಕಾನೂನು ಸಲಹೆ ಪಡೆದಿದೆ ಎಂದು ವಿವಿಧ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಸಂಸತ್ತಿನ ಉಭಯ ಸದನಗಳಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿದ ಮಸೂದೆಗಳನ್ನು 'ಗಂಭೀರ ಸಾಂವಿಧಾನಿಕ ವಿಷಯಗಳು' ಎಂದು ಕ್ಯಾಬಿನೆಟ್ ಹೇಳಿದೆ. ಆದರೆ ಗುತ್ತಿಗೆ ಕೃಷಿಗೆ ಅವಕಾಶ ನೀಡುವ ಮತ್ತು ರೈತರು ತಮ್ಮ ಬೆಳೆಗಳನ್ನು ಯಾರಿಗಾದರೂ ಮಾರಾಟ ಮಾಡಲು ಅನುಮತಿಸುವ ಮಸೂದೆಗಳು 'ಐತಿಹಾಸಿಕ' ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರದ ಬಳಿಕ ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಹೊಸ ಮಸೂದೆಗಳು ಬೆಂಬಲ ಬೆಲೆ ವ್ಯವಸ್ಥೆಯನ್ನು ಕೊನೆಗೊಳಿಸುತ್ತವೆ ಎಂದು ವಾದಗಳು ಕೇಳಿಬಂದಿವೆ.
ರಾಜ್ಯ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಮತ್ತು ಇತರರು ಹೊಸ ಮಸೂದೆಯನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರದ ಅತಿಕ್ರಮಣ ಎಂದು ಹೇಳಿದ್ದಾರೆ. ರಾಜ್ಯಗಳ ಅಭಿಪ್ರಾಯಗಳನ್ನು ಕೋರದೆ ಮಸೂದೆ ವಿಧಿಸುವ ಪ್ರಯತ್ನ ನಡೆಯುತ್ತಿದೆ ಮತ್ತು ಮಸೂದೆಗಳ ವಿರುದ್ಧ ಸುಪ್ರೀಂ ಕೋರ್ಟ್ ನ್ನು ಸಂಪರ್ಕಿಸುವಂತೆ ಕಾನೂನು ಇಲಾಖೆಗೆ ಸೂಚಿಸಿದ್ದೇನೆ ಎಂದು ಕೃಷಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕೃಷಿ ಮಸೂದೆ ರೈತರ 'ಹತ್ಯಾಕಾಂಡ' ಮತ್ತು 'ಡೆತ್ ವಾರಂಟ್' ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ ಬೆಂಬಲ ಬೆಲೆಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.