ವರದಿಗಾರನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದಿಂದ ಹಾಂಕಾಂಗ್ ಮಾಧ್ಯಮ ದಿಗ್ಗಜ ಜಿಮ್ಮಿ ಲಾಯಿ ಖುಲಾಸೆಗೊಂಡಿದ್ದಾರೆ. ಈ ಮೂಲಕ ಹಾಂಕಾಂಗ್‌ನ ಆಂತರಿಕ ವಿಷಯದಲ್ಲಿ ತಲೆ ಹಾಕಲು ಯತ್ನಿಸುತ್ತಿರುವ ಚೀನಿ ಪಡೆಗೆ ಭಾರಿ ಮುಖಭಂಗವಾಗಿದೆ. ಆಪಲ್ ಡೈಲಿ ಸಂಸ್ಥಾಪಕ ಜಿಮ್ಮಿ ಲಾಯಿ, ತಮ್ಮ ಪ್ರತಿಸ್ಪರ್ಧಿ ಪತ್ರಿಕೆಯ ವರದಿಗಾರನಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು.
2017ರಲ್ಲಿ ನಡೆದಿದ್ದ ಘಟನೆ ಸಂಬಂಧ ದಿಢೀರ್ ಅಂತಾ ಜಿಮ್ಮಿ ಲಾಯಿ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈಗ ತೀರ್ಪು ಹೊರಬಿದ್ದು ಜಿಮ್ಮಿ ಲಾಯಿ ಖುಲಾಸೆಯಾಗಿದ್ದಾರೆ. ಆದರೆ ಇಷ್ಟೂ ನಾಟಕೀಯ ಬೆಳವಣಿಗೆ ಹಿಂದೆ ಚೀನಾ ಕುತಂತ್ರ ಅಡಗಿದೆ. ಜಿಮ್ಮಿ ದಿಢೀರ್ ಬಂಧನದ ಹಿಂದೆ ಇದೇ ಚೀನಾ ಕೈವಾಡವಿದೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ಹಾಂಕಾಂಗ್‌ನಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿದೆ.ಚೀನಾದ ಕಪಿಮುಷ್ಠಿಯಿಂದ ಹಾಂಕಾಂಗ್ ಉಳಿಸಲು ಜನ ಬೀದಿಗಿಳಿದು ಹೋರಾಡುತ್ತಿದ್ದಾರೆ. ಆದರೆ ಇದು ಚೀನಾಗೆ ಉರಿ ತಂದಿತ್ತು. ಅದರಲ್ಲೂ ಅಮೆರಿಕ ಈ ಹೋರಾಟಕ್ಕೆ ಬೆಂಬಲ ನೀಡಿದ ನಂತರ ಹಾಂಕಾಂಗ್‌ನ ತನ್ನ ಹಿಡಿತಕ್ಕೆ ಪಡೆಯಲು ಚೀನಾ ಮಾಡಬಾರದ ಕೆಲಸವನ್ನೆಲ್ಲಾ ಮಾಡುತ್ತಿದೆ. ಚೀನಾದ ಈ ಕುತಂತ್ರದಿಂದ ಜಿಮ್ಮಿ ಲಾಯಿ ಜೈಲು ಸೇರಿದ್ದರು, ಆದರೆ ಈಗ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ನೆಮ್ಮದಿಯಾಗಿ ಉಸಿರಾಡಲೂ ಆಗುತ್ತಿಲ್ಲ ಚೀನಾ ಎಂಬ ಭಸ್ಮಾಸುರನ ಕರಿನೆರಳು ಬಿದ್ದಕಡೆ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಈಗ ಹಾಂಕಾಂಗ್‌ನಲ್ಲಿ ಆಗಿರುವುದು ಕೂಡ ಅದೇ. ಇನ್ನೇನು ಹಾಂಕಾಂಗ್ ತನ್ನಿಂದ ದೂರ ಹೋಯಿತು ಎನ್ನುವಷ್ಟರಲ್ಲಿ ಅಲ್ಲಿನ ರಾಜಕಾರಣಿಗಳನ್ನು ಬುಟ್ಟಿಗೆ ಹಾಕಿಕೊಂಡ ಕುತಂತ್ರಿ ಚೀನಾ, ಹಾಂಕಾಂಗ್‌ನಲ್ಲಿ ಪ್ರತಿಭಟನೆ ಹತ್ತಿಕ್ಕಲು ಹೊಸ ಕಾನೂನು ಜಾರಿಗೆ ತಂದಿತ್ತು. ಹೊಸ ಕಾನೂನಿನಲ್ಲಿ ಹೋರಾಟ ಹತ್ತಿಕ್ಕುವುದರಿಂದ ಹಿಡಿದು, ಹೋರಾಟಗಾರರ ನೆಮ್ಮದಿ ಕೆಡಿಸುವ ತನಕ ಎಲ್ಲವನ್ನೂ ಚೀನಾ ಪ್ಲಾನ್ ಮಾಡಿ ಕೊಟ್ಟಿತ್ತು. ಅದರಂತೆ ಹಾಂಕಾಂಗ್ ನಾಯಕರು ಹೊಸ ಕಾನೂನು ಜಾರಿಗೆ ತಂದಿದ್ದು, ಹಾಂಕಾಂಗ್‌ನಲ್ಲಿ ಖಾಸಗಿ ಮಾಹಿತಿಗಳನ್ನು ಸರ್ಕಾರ ಕದಿಯುತ್ತಿದೆ. ಜಿಮ್ಮಿ ಲಾಯಿ ಅವರಂತಹ ದಿಗ್ಗಜರನ್ನು ಕೂಡ ಹಿಡಿದು, ಹಿಡಿದು ಒಳಗೆ ಹಾಕುತ್ತಿದೆ. ಈ ಮಧ್ಯೆ ಜಿಮ್ಮಿ ಲಾಯಿ ಬಿಡುಗಡೆಗೆ ಕೋರ್ಟ್ ಆದೇಶಿಸಿರುವುದು ಚೀನಿ ಗ್ಯಾಂಗ್‌ಗೆ ಶಾಕ್ ನೀಡಿದೆ.
ನೆಮ್ಮದಿಯೇ ಇಲ್ಲದ ದೇಶ ಹಾಂಕಾಂಗ್:
ಹಲವು ವರ್ಷಗಳ ಕಾಲ ಬ್ರಿಟಿಷರ ಅಡಿಯಾಳಾಗಿದ್ದ ಹಾಂಕಾಂಗ್ ಸ್ವತಂತ್ರಗೊಂಡರೂ ನೆಮ್ಮದಿಯೇ ಇಲ್ಲ. ಏಕೆಂದರೆ ಅಲ್ಲಿ ಚೀನಾ ಎಂಟ್ರಿ ಕೊಟ್ಟಿತ್ತು. ಮೊದ ಮೊದಲು ಸ್ವತಂತ್ರ ದೇಶದಂತೆ ಬಾಳಿದ್ದ ಹಾಂಕಾಂಗ್ ಮೇಲೆ ಚೀನಾ ಮೆಲ್ಲಗೆ ಹಿಡಿತ ಸಾಧಿಸಿತ್ತು. ಹಾಂಕಾಂಗ್ ರಾಜಕಾರಣಿಗಳ ಬ್ರೈನ್ ವಾಶ್ ಮಾಡಿ ಹೈಜಾಕ್ ಮಾಡಿದೆ. ಇದರ ಪರಿಣಾಮ ಅಲ್ಲಿನ ಜನರಿಗೆ ನೆಮ್ಮದಿಯೇ ಇಲ್ಲವಾಗಿದೆ. ಅಷ್ಟೊಂದು ಅಭಿವೃದ್ಧಿ ಹೊಂದಿದ್ದರೂ, ಬೇರೆ ಯಾವುದೋ ದೇಶ ಹಾಂಕಾಂಗ್ ಜನರನ್ನು ಕಂಟ್ರೋಲ್ ಮಾಡುತ್ತಿದೆ. ಅತ್ತ ತೈವಾನ್ ದೇಶದ ಮೇಲೂ ಕಣ್ಣಿಟ್ಟು ಕೂತಿರುವ ಚೀನಾಗೆ ಹಾಂಕಾಂಗ್ ಕೂಡ ಬೇಕಾಗಿದೆ. ಆದರೆ ಇದು ನನಸಾಗದಂತೆ ತಡೆಯಲು ಅಮೆರಿಕ ಶತಾಯಗತಾಯ ದಾಳ ಉರುಳಿಸುತ್ತಿದೆ.