ಕುಂಬಳೆ: ಮಂಗಲ್ಪಾಡಿಯಲ್ಲಿರುವ ಮಂಜೇಶ್ವರ ತಾಲ್ಲೂಕು ಆಸ್ಪತ್ರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಂಗಲ್ಪಾಡಿ ಜನಕೀಯ ವೇದಿಕೆ ನಡೆಸುತ್ತಿರುವ ಮುಷ್ಕರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಪದಾಧಿಕಾರಿಗಳು ಶನಿವಾರ ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯವರೇ ಆದ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಅಭಿವೃದ್ಧಿಗೆ ಸಂಬಂಧಿಸಿದಂತೆ ಜನಕೀಯ ವೇದಿಕೆಗೆ ನೀಡಿದ ಭರವಸೆಯ ಆಧಾರದ ಮೇಲೆ ತಾತ್ಕಾಲಿಕವಾಗಿ ಮುಷ್ಕರ ಹಿಂತೆಗೆಯಲಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಹಿಂದೆ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಸಾಕ್ ಅವರು ಮಂಗಲ್ಪಾಡಿ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೇಶ್ವರ ತಾಲೂಕು ಆಸ್ಪತ್ರೆಯಾಗಿ ಭಡ್ತಿಗೊಳಿಸಲು ಶ್ರಮವಹಿಸಿದ್ದರು. ಆರಂಭದಲ್ಲಿ ಒಳರೋಗಿ ಮತ್ತು ಹೆರಿಗೆ ಸೌಲಭ್ಯಗಳನ್ನು ಹೊಂದಿದ್ದ ಆಸ್ಪತ್ರೆಯನ್ನು ತಾಲೂಕು ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಸಂದರ್ಭ ಆಸ್ಪತ್ರೆ ಇನ್ನಷ್ಟು ಅಭಿವೃದ್ದಿಗೊಳ್ಳುವುದೆಂದು ಸಾರ್ವಜನಿಕರು ಕುತೂಹಲಿಗರಾಗಿದ್ದರು. ಆದರೆ ಹಲವು ವರ್ಷಗಳು ಕಳೆದರೂ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಹೆರಿಗೆ ಮತ್ತು ಒಳರೋಗಿಗಳ ಸೌಲಭ್ಯಗಳನ್ನು ಪುನರಾರಂಭಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಈ ಕಾರಣದಿಂದ ನಾಗರಿಕರು ಜನಕೀಯ ವೇದಿಕೆ ರಚಿಸಿ ಮುಷ್ಕರ ನಡೆಸಿದರು. ಕೋವಿಡ್ ಸಮಸ್ಯೆಗಳ ಕಾರಣ ಲಾಕ್ ಡೌನ್ ಸಮಯದಲ್ಲಿ ಕರ್ನಾಟಕ ಸರ್ಕಾರವು ರಾಜ್ಯ ಗಡಿಯನ್ನು ಮುಚ್ಚಿದ ಕಾರಣ ಸೂಕ್ತ ಚಿಕಿತ್ಸೆಗಳ ಕೊರತೆಯಿಂದ 15 ಜನರು ಸಾವನ್ನಪ್ಪಿದರು. ಘಟನೆಯೊಂದಿಗೆ ತಾಲೂಕು ಆಸ್ಪತ್ರೆಯ ಅಭಿವೃದ್ಧಿಗಾಗಿ ಸಮಿತಿಯ ಹೋರಾಟಗಳು ತೀವ್ರಗೊಂಡವು.
ಉಪ್ಪಳ ಸಾಮಾಜಿಕ ಮತ್ತು ಸಾಂಸ್ಕøತಿಕ ಕಾರ್ಯಕರ್ತ ಲತೀಫ್ ಉಪ್ಪಳ ಗೇಟ್ ಆಸ್ಪತ್ರೆಗೆ ಕೊಡಮಾಡಿದ ಡಯಾಲಿಸಿಸ್ ಯಂತ್ರಗಳು ಮತ್ತು ಶಾಸಕರ ನಿಧಿ ಬಳಸಿ ನಿರ್ಮಿಸಿದ ಕಟ್ಟಡ ಇದೀಗ ಸಿದ್ದಗೊಂಡಿದ್ದು ನೂತನ ಡಯಾಲಿಸಿಸ್ ಘಟಕ ಬುಧವಾರ ಉದ್ಘಾಟನೆಗೊಳ್ಳಲಿದೆ. ಆದರೂ ಈ ವ್ಯವಸ್ಥೆಗಳನ್ನು ನಿರ್ವಹಿಸಲು ಅಗತ್ಯ ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಅಸ್ಪಷ್ಟತೆಗಳಿದ್ದು ಕಾದು ನೋಡಬೇಕಿದೆ. ಈ ಬಗ್ಗೆ ಈಗಾಗಲೇ ಜನಕೀಯ ವೇದಿಕೆ ಸಂಬಂಧಪಟ್ಟವರ ಗಮನಕ್ಕೆ ಗಂಭೀರತೆಯನ್ನು ತಿಳಿಯಪಡಿಸಿದ್ದು ತಂತ್ರಜ್ಞರು, ವೈದ್ಯರು ಮತ್ತು ಸಂಬಂಧಿತ ಸಿಬ್ಬಂದಿಗಳ ಕೊರತೆಯನ್ನು ಒಂದೂವರೆ ತಿಂಗಳಲ್ಲಿ ಪರಿಹರಿಸಲಾಗುವುದು ಮತ್ತು ಕಟ್ಟಡಗಳು ಮತ್ತು ಸಾಮಗ್ರಿಗಳು ಸೇರಿದಂತೆ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ನೀಡಲಾಗುವುದು ಎಂದು ಸಚಿವರು ಜನಕಿಯವೇದಿಕೆಗೆ ಭರವಸೆ ನೀಡಿದ್ದಾರೆ.
ಈ ಭರವಸೆಯ ಮೇರೆಗೆ, ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಭರವಸೆಯಂತೆ ಕಾರ್ಯ ನಿರ್ವಹಿಸದಿದ್ದಲ್ಲಿ ಉಪವಾಸ ಮುಷ್ಕರ ರಿಲೇ ಸತ್ಯಾಗ್ರಹಗಳು ಸೇರಿದಂತೆ ಸರಣಿ ಮುಷ್ಕರಗಳೊಂದಿಗೆ ಒಂದೂವರೆ ತಿಂಗಳಲ್ಲಿ ಮತ್ತೆ ಹೋರಾಟ ನಡೆಸಲಾಗುವುದೆಂದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜನಕೀಯ ವೇದಿಕೆ ಸಂಚಾಲಕ ನ್ಯಾಯವಾದಿ. ಕರೀಮ್ ಪುಣೆ, ಕಾರ್ಯದರ್ಶಿ ನ್ಯಾಯವಾದಿ ಉದಯಕುಮಾರ್ ಗಟ್ಟಿ, ಸದಸ್ಯರಾದ ಡಾ. ಮಜೀದ್, ಒ.ಎಂ. ರಶೀದ್, ಜೈನು ಅಡ್ಕ ಮತ್ತು ಅಜ್ಮಲ್ ಪುಣೆ ಉಪಸ್ಥಿತರಿದ್ದರು.