ಕಾಸರಗೋಡು: ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುತ್ತಿರುವ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಪ್ರಬುದ್ಧ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಅವರು ಮಂಗಳವಾರ ಕಾಸರಗೋಡು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಎಣ್ಮಕಜೆ, ಪೈವಳಿಕೆ, ಕಾರಡ್ಕ ಪಂಚಾಯಿತಿಗಳಲ್ಲಿ ಸಿಪಿಎಂ, ಮುಸ್ಲಿಂಲೀಗ್, ಹಾಗೂ ಕಾಂಗ್ರೆಸ್ ಒಟ್ಟಾಗಿ ಆಡಳಿತ ನಡೆಸುತ್ತಿದ್ದು, ಹೊಂದಾಣಿಕೆ ರಾಜಕೀಯವನ್ನು ಪಂಚಾಯಿತಿಯಿಂದ ತೊಡಗಿ ವಿಧಾನಸಭೆ ವರೆಗೂ ಮುಂದುವರಿಸಿದೆ. ಎರಡೂ ರಂಗಗಳು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ನೈತಿಕ ಹಕ್ಕು ಕಳೆದುಕೊಂಡಿದೆ. ವಂಚಕರಿಗೆ ಸಂರಕ್ಷಣೆ ನೀಡುತ್ತಿರುವ ಸರ್ಕಾರ ಮತ್ತು ಪ್ರತಿಪಕ್ಷ ರಾಜ್ಯದ ಜನತೆಯನ್ನು ವಂಚಿಸುತ್ತಿದೆ. ಕುರಾನ್ ಮರೆಯಲ್ಲಿ ಚಿನ್ನ ಸಾಗಾಟ ನಡೆಸುವ ಮೂಲಕ ಪವಿತ್ರ ಗ್ರಂಥಕ್ಕೆ ಅಪಮಾನವೆಸಗಿರುವ ಸಚಿವ ಕೆ.ಟಿ ಜಲೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ತಮ್ಮದೇ ಸಚಿವನ ಭ್ರಷ್ಟಾಚಾರ ಮುಚ್ಚಿಹಾಕಲು ಸರ್ಕಾರ, ವಂಚನಾಪ್ರಕರಣದಲ್ಲಿ ಶಾಮೀಲಾಗಿರುವ ಪ್ರತಿಪಕ್ಷದ ಶಾಸಕನನ್ನೂ ರಕ್ಷಿಸಲು ಯತ್ನಿಸುತ್ತಿರುವುದಾಗಿ ಆರೋಪಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಉಪಸ್ಥಿತರಿದ್ದರು.