ವಿಶ್ವದಲ್ಲಿ ಸುಮಾರು 140 ಕಂಪೆನಿಗಳಲ್ಲಿ ಕೋವಿಡ್-19ಗೆ ಲಸಿಕೆ ಕಂಡುಹಿಡಿಯುತ್ತಿರುವ ಕಾರ್ಯ ನಡೆಯುತ್ತಿದೆ. ಅವುಗಳಲ್ಲಿ 16 ಕಂಪೆನಿಗಳು ಕ್ಲಿನಿಕಲ್ ಪ್ರಯೋಗದ ಹಂತ ತಲುಪಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅವುಗಳಲ್ಲಿ ಚೀನಾ ದೇಶದಲ್ಲಿ 5, ಅಮೆರಿಕದಲ್ಲಿ 3, ಇಂಗ್ಲೆಂಡ್ ನಲ್ಲಿ 2, ಜರ್ಮನಿ, ರಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ತಲಾ ಒಂದು ಕಂಪೆನಿಗಳು ಕ್ಲಿನಿಕಲ್ ಪ್ರಯೋಗ ಹಂತ ತಲುಪಿವೆ. ಇದೀಗ ಭಾರತದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಗೆ ಭಾರತ್ ಬಯೋಟೆಕ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿತ್ತು. ಇದೀಗ ಈ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಕೊವಾಕ್ಸಿನ್ ಲಸಿಕೆಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ್ದು, ಯಶಸ್ವಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಟ್ವೀಟ್ ಮಾಡಿದೆ.
ಭಾರತ್ ಬಯೋಟೆಕ್ ಸಂಸ್ಥೆ ಇದುವರೆಗೆ ಪೋಲಿಯೋ, ರೇಬಿಸ್, ರೊಟಾ ವೈರಸ್, ಚಿಕಾನ್ ಗುನ್ಯಾ, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಜಿಂಕಾ ವಿರುದ್ಧದ ಕಾಯಿಲೆಗಳಿಗೆ ಲಸಿಕೆಯನ್ನು ಕಂಡುಹಿಡಿದಿದೆ. ಇದೀಗ ಮಾರಣಾಂತಿಕ ಕೊರೋನಾ ವೈರಸ್ಗೂ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದೆ.
ಚೀನಾ ದೇಶ ಈಗಾಗಲೇ ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆಯನ್ನು ಕಂಡುಹಿಡಿದಿದ್ದು, ನವೆಂಬರ್ ತಿಂಗಳಲ್ಲಿ ಇದರ ಮೊದಲ ಹಂತದ ಪ್ರಯೋಗವನ್ನು ಆರಂಭಿಸಲಿದೆ. ಇದಕ್ಕಾಗಿ 100 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಚೀನಾದ ನ್ಯಾಷನಲ್ ಮೆಡಿಕಲ್ ಪ್ರೊಡಕ್ಟ್ ಅಡ್ಮಿನಿಸ್ಟ್ರೇಷನ್ನಿಂದ ಅನುಮತಿ ಪಡೆದ ಏಕೈಕ ಔಷಧ ಪ್ರಯೋಗ ಇದಾಗಿದೆ. ಈ ಲಸಿಕೆ ಕೇವಲ ಕೊರೋನಾ ವೈರಸ್ ಅನ್ನು ಮಾತ್ರವಲ್ಲದೆ ಹೆಚ್1ಎನ್1, ಹೆಚ್3ಎನ್2, ಬಿ ಇನ್ಫ್ಲುಯೆಂಜಾ ವೈರಸ್ ಅನ್ನು ಕೂಡ ನಿಯಂತ್ರಿಸಬಲ್ಲದು ಎನ್ನಲಾಗಿದೆ.