ದೆಹಲಿ : ದೆಹಲಿ ಕೋಮು ಗಲಭೆಯಲ್ಲಿ ಹಿಂಸಾಚಾರಕ್ಕೆ ಸಾಮಾಜಿಕ ಜಾಲತಾಣದ ವೇದಿಕೆ ಸಹಭಾಗಿತ್ವ ನೀಡಿದ ಆರೋಪದ ಕುರಿತು ದೆಹಲಿ ವಿಧಾನಸಭೆ ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಫೇಸ್ಬುಕ್ ಇಂಡಿಯಾ ಉಪಾಧ್ಯಕ್ಷರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಈ ಸಮನ್ಸ್ ವಿರುದ್ಧ ಉಪಾಧ್ಯಕ್ಷ ಅಜಿತ್ ಮೋಹನ್ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಇಂದು ಸರ್ವೋಚ್ಛ ನ್ಯಾಯಾಲಯ ಈ ಅರ್ಜಿ ಕೈಗೆತ್ತಿಕೊಳ್ಳಲಿದೆ. ನ್ಯಾಯಾಮೂರ್ತಿಗಳಾದ ಎಸ್ಕೆ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಅರ್ಜಿ ಆಲಿಸಲಿದೆ.
ಈ ಪ್ರಕರಣ ಈಗಾಗಲೇ ಸಂಸದೀಯ ಸಮಿತಿ ಮುಂದೆ ಇರುವುದರಿಂದ ದೆಹಲಿ ವಿಧಾನ ಸಭೆ ಮುಂದೆ ಹಾಜರಾಗುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಫೇಸ್ಬುಕ್ ಇಂಡಿಯಾ ಮುಖ್ಯಸ್ಥರು ಅರ್ಜಿ ಸಲ್ಲಿಸಿದ್ದಾರೆ. ನಿಯಮವನ್ನು ಗಾಳಿಗೆ ತೂರಿ ಫೇಸ್ಬುಕ್ ದ್ವೇಷ ಭಾವನೆಗೆ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿದ ಆರೋಪದ ಮೇಲೆ ಅವರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಹಲವು ಬಾರಿ ಸಮನ್ಸ್ ನೀಡಿದರೂ ಹಾಜರಾಗಲೂ ವಿಫಲರಾದ ಹಿನ್ನಲೆ ಭಾನುವಾರ ಸಮಿತಿ ಹೊಸ ಮತ್ತು ಅಂತಿಮಬಾರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಕುರಿತು ಸೋಮವಾರ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿತ್ತು. ಇದರ ಸಮನ್ಸ್ ವಿರುದ್ಧ ಅಜಿತ್ ಮೋಹನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.