ನವದೆಹಲಿ: ರಾಜತಾಂತ್ರಿಕ ಮಟ್ಟದಲ್ಲಿ ಭಾರತ-ಚೀನಾ ಗಡಿ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕೆಂದು ತಮಗೆ ಸಂಪೂರ್ಣವಾಗಿ ಮನವರಿಕೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನ ವಾತಾವರಣದ ಪರಿಸ್ಥಿತಿಯನ್ನು ಅಥವಾ ಗಡಿಯ ವಿಚಾರ ಬಂದಾಗ ಅದರ ಸವಾಲುಗಳನ್ನು ತಾವು ಮತ್ತು ತಮ್ಮ ಸರ್ಕಾರ ಹಗುರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರತಿಪಾದಿಸಿದ ಅವರು, ಈ ಸಂದರ್ಭದಲ್ಲಿ ಎರಡೂ ದೇಶಗಳು ಒಂದು ಹೊಂದಾಣಿಕೆಗೆ ಬರುವುದು ನಮಗೆ ಮಾತ್ರವಲ್ಲದೆ ಇಡೀ ಪ್ರಪಂಚದ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದ್ದಾರೆ.
ಲಡಾಕ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಗಡಿ ಸಮಸ್ಯೆ ಬಗ್ಗೆ ನಮ್ಮ ಸರ್ಕಾರ ದೀರ್ಘವಾದ ದೃಷ್ಟಿಕೋನ ಹೊಂದಿದ್ದು ನಮ್ಮ ನಿಲುವು ಸ್ಪಷ್ಟವಾಗಿದೆ. ಚೀನಾದ ಜೊತೆಗೆ ನಮ್ಮ ಒಪ್ಪಂದ ಏರ್ಪಟ್ಟಿದೆ, ಆ ಒಪ್ಪಂದ ಪ್ರಕಾರವೇ ಭಾರತ ಮತ್ತು ಚೀನಾ ಎರಡೂ ದೇಶಗಳು ನಡೆಯಬೇಕಾದದ್ದು ಮುಖ್ಯ ಎಂದು ನಿನ್ನೆ ಆನ್ ಲೈನ್ ನಲ್ಲಿ ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಗಡಿಯಲ್ಲಿನ ಸಂಘರ್ಷದಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಉಂಟಾಗುತ್ತಿದೆ. ಆದರೆ ಈ ಸಮಸ್ಯೆಗೆ ರಾಜತಾಂತ್ರಿಕ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬೇಕಿದೆ. ಇದನ್ನು ಒಬ್ಬ ಭಾರತ ಸರ್ಕಾರದ ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿ ಕುಳಿತುಕೊಂಡು ಹೇಳುತ್ತಿದ್ದೇನೆ ಎಂದರು.
1962ರಲ್ಲಿ ಭಾರತ-ಚೀನಾ ಮಧ್ಯೆ ನಡೆದ ಕದನ ನಂತರ ಎರಡೂ ದೇಶಗಳ ಗಡಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಉದ್ವಿಗ್ನ ಸ್ಥಿತಿ ಕಂಡುಬರುತ್ತಿದೆ. ಎರಡೂ ದೇಶಗಳ ಸೇನೆಯಿಂದ ಸಾವಿರಾರು ಪಡೆಗಳನ್ನು ಗಡಿಭಾಗದಲ್ಲಿ ನಿಯೋಜಿಸಲಾಗಿದೆ. ಕಳೆದ ವಾರಾಂತ್ಯದಿಂದ ಭಾರತ ಮತ್ತಷ್ಟು ಸೇನೆಯನ್ನು ಭದ್ರತೆ ಹೆಚ್ಚಿಸುವ ಸಲುವಾಗಿ ನಿಯೋಜಿಸಿದೆ.