ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಅತಿವೃಷ್ಟಿಯ ಪರಿಣಾಮ ಇಬ್ಬರು ಬಲಿಯಾಗಿದ್ದು, ಅಪಾರ ಹಾನಿ ಸಂಭವಿಸಿದೆ.
ಮಧೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇನಕ್ಕೋಡು ಪರಪ್ಪಾಡಿ ನಿವಾಸಿ ಚಂದ್ರಶೇಖರ(37) ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಹೊಸದುರ್ಗ ತಾಲೂಕಿನ ಚೆರುವತ್ತೂರು ಗ್ರಾಮದ ಮಯ್ಯಿಚ್ಚ ಕೋಳಾಯಿ ನಿವಾಸಿ ಸುಧನ್(50) ಎಂಬವರು ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ನೆರೆ ಹಾವಳಿಯ ಹಿನ್ನೆಲೆಯಲ್ಲಿ ಮಧೂರು ಗ್ರಾಮದ ಮೊಗರು ಪ್ರದೇಶದ 7 ಕುಟುಂಬಗಳನ್ನು, ಪಟ್ಲ ಪ್ರದೇಶದ 3 ಕುಟುಂಬಗಳನ್ನು ಸುರಕ್ಷಿತ ತಾಣಗಳಿಗೆ ವರ್ಗಾಯಿಸಲಾಗಿದೆ. ಪಿಲಿಕೋಡ್ ಗ್ರಾಮದ ಮಾಲಿಯತ್ ರಸ್ತೆಯಲ್ಲಿ ನೆರೆಹಾವಳಿ ತಲೆದೋರಿದ ಪರಿಣಾಮ ಇಲ್ಲಿನ ಸುಮಾರು 60 ಮನೆಗಳು ಜಲಾವೃತವಾಗಿವೆ. ಮಡಿಕೈ ಗ್ರಾಮದ ಬಂತಲಕುನ್ನು ನಿವಾಸಿ ಕುಮಾರನ್ ಎಂಬವರ ಮನೆಯ ಬಾವಿ ಕುಸಿದಿದೆ.
ಮಂಜೇಶ್ವರ ತಾಲೂಕಿನ ಫೆಲಿಕ್ಸ್ ಡಿಸೋಜಾ ಎಂಬವರ ಹೆಂಚಿನ ಮನೆಯ ಮೇಲೆ ಮಾವಿನ ಮರ ಉರುಳಿ ಹಾನಿಯಾಗಿದೆ. ಕುಂಬಡಾಜೆ ಗ್ರಾಮದ ಉಪ್ಪಂಗಳಮೂಲೆ ನಿವಾಸಿ ಲಕ್ಷ್ಮೀನಾರಾಯಣ ಭಟ್ ಎಂಬವರ ಮನೆ ಮೇಲೆ ಮರವೊಂದು ಉರುಳಿ ಭಾಗಶಃ ಹಾನಿಯಾಗಿದೆ. ಪಿಲಿಕೋಡ್ ಗ್ರಾಮದ ಮುಳ್ಳಿಕ್ಕಾಲ್ ನಿವಾಸಿ ಚಿರಿ ಎಂಬವರ ಮನೆ ಮರವುರುಳಿ ಭಾಗಶಃ ಹಾನಿಗೀಡಾಗಿದೆ.
ಬಿರುಸಿನ ಗಾಳಿಮಳೆಗೆ ಕಾಸರಗೋಡು ಅಡ್ಕತ್ತಬೈಲು ಕಡಲತೀರದ ಸತ್ಯನಾರಾಯಣ ಮಠ ಬಳಿಯ 12 ಮನೆಗಳು ಬಾಗಶಃ ಹಾನಿಗೀಡಾಗಿವೆ. ಕೊಡ್ಲ ಮೊಗರು ಗ್ರಾಮದ ಬೇತ್ತಲ ನಿವಾಸಿ ರಾಮಕೃಷ್ಣ ಎಂಬವರ ಮನೆ ಭಾಗಶಃ ಹಾನಿಗೊಂಡಿದೆ. ಕೋಟಿಕುಳಂ ಗ್ರಾಮದ ಮಾಳಿಕವಳಪ್ಪಿಲ್ ನಿವಾಸಿ ಕಾತ್ರ್ಯಾಯಿನಿ ಎಂಬ ಮನೆ ಬಿರುಸಿನ ಗಾಳಿಮಳೆಗೆ ಪೂರ್ಣರೂಪದಲ್ಲಿ ಹಾನಿಗೀಡಾಗಿದೆ.
ಬಿರುಸಿನ ಮಳೆ ತಂದದ್ದು 360.39 ಲಕ್ಷ ರೂ.ನ ಕೃಷಿನಾಶ:
ಕಾಸರಗೋಡು ಜಿಲ್ಲೆಯಲ್ಲಿ ಸೆ.18,19,20ರಂದು ಸುರಿದ ಮಳೆಯ ಪರಿಣಾಮ ನಡೆದಿರುವುದು 360.39 ಲಕ್ಷ ರೂ.ನ ಕೃಷಿ ನಾಶ. 244.64 ಹೆಕ್ಟೇರ್ ಕೃಷಿ ನಷ್ಟವಾಗಿದೆ. 204 ಹೆಕ್ಟೇರ್ ಭತ್ತದ ಕೃಷಿ ಹಾನಿಗೀಡಾಗಿದೆ. 85 ತೆಂಗಿನಮರಗಳು, 65 ಅಡಕೆ ಮರಗಳು ಬುಡಕಳಚಿಕೊಂಡು ಉರುಳಿವೆ. ಸೆ.20ರಂದು ಮಾತ್ರ 310.22 ಲಕಷ ರೂ.ನ ನಷ್ಟ ಸಂಭವಿಸಿದೆ ಎಂದು ಕೃಷಿ ಇಲಾಖೆಯ ವರದಿ ತಿಳಿಸಿದೆ.
ಕಾಸರಗೋಡು ಕಡಪ್ಪುರಂನಲ್ಲಿ ಮಳೆಯಿಂದ ಹಾನಿ:
ಕಾಸರಗೋಡು ಕಡಪ್ಪುರಂ ನಲ್ಲಿ ಸೋಮವಾರ ಸುರಿದ ಬಿರುಸಿನ ಗಾಳಿಮಳೆಗೆ 4 ಮನೆಗಳ ಮೇಲ್ಪಾವಣಿ ಪೂರ್ಣರೂಪದಲ್ಲಿ ಹಾನಿಗೀಡಾಗಿದೆ. 8 ಮನೆಗಳು ಭಾಗಶಃ ಹಾನಿಗೀಡಾಗಿವೆ. ಒಂದು ಮನೆಯ ಕಿಟಿಕಿ ಗಾಜುಗಳು ಒಡೆದಿವೆ. ಅಪಾಯಕಾರಿ ಸ್ಥಿತಿಯಲ್ಲಿರುವ ಇಲ್ಲಿನ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ತಾಣಗಳಿಗೆ ತೆರಳುವಂತೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಸುಮಾರು 3 ಲಕ್ಷ ರೂ.ನ ನಷ್ಟ ಅಂದಾಜಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
24 ತಾಸುಗಳಲ್ಲಿ 18 ಮನೆಗಳಿಗೆ ಭಾಗಶಃ ಹಾನಿ:
ಕಾಸರಗೋಡು ಜಿಲ್ಲೆಯಲ್ಲಿ ಕಳೆದ 24 ತಾಸುಗಳಲ್ಲಿ ಸುರಿದ ಬಿರುಸಿನ ಮಳೆಗೆ 18 ಮನೆಗಳು ಭಾಗಶಃ ಹಾನಿಗೊಂಡಿವೆ. ಈ ಅವಧಿಯಲ್ಲಿ 85.31 ಮಿ.ಮೀ. ಮಳೆ ಬಂದಿದೆ. ಬಿರುಸಿನ ಮಳೆಗಾಲ ಆರಂಭಗೊಂಡ ನಂತರ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 3793.33 ಮಿ.ಮೀ. ಮಳೆ ಲಭಿಸಿದೆ.