ಬೆಂಗಳೂರು: ಪಾಲಿಶ್ ಮಾಡಿದ ಅಕ್ಕಿಯನ್ನು ಸೇವಿಸುವ ತಾಯಂದಿರ ಎದೆಹಾಲಿನಲ್ಲಿ ಪೌಷ್ಟಿಕಾಂಶ ಕೊರತೆ ಎದುರಾಗಲಿದ್ದು, ಪರಿಣಾಮವಾಗಿ ಶಿಶುಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗಬಹುದು ಎಂಬ ಆತಂಕಕಾರಿ ವಿಷಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.
ಮಕ್ಕಳ ಹೃದ್ರೋಗ ತಜ್ಞರಾದ ಡಾ. ಉಷಾ, ಡಾ. ಜಯರಂಗನಾಥ್ ನೇತೃತ್ವದ ವೈದ್ಯರ ತಂಡವು ‘ಪಾಲಿಶ್ ಮಾಡಲಾದ ಅಕ್ಕಿ, ಆಹಾರ ಸೇವನೆ ನಿರ್ಬಂಧ ಮತ್ತು ಶಿಶುಗಳಲ್ಲಿ ಹೃದಯ ವೈಫಲ್ಯ’ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ.
ಈ ಪ್ರಕಾರ, ದೇಶದ ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಪಾಲಿಶ್ ಮಾಡಿದ ಬಳಿಕ ಅಕ್ಕಿಯ ಮೇಲ್ಪದರ ನಾಶವಾಗುತ್ತದೆ. ಆ ಮೇಲ್ಪದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ1 ಪ್ರಮಾಣ ಇರುತ್ತದೆ ಎಂಬ ಅಂಶವನ್ನು ಸಂಸ್ಥೆಯು ವರದಿಯಲ್ಲಿ ಉಲ್ಲೇಖಿಸಿದೆ.