ನವದೆಹಲಿ: ಚೀನೀ ಸೇನೆಯ ಉಪಟಳ ಹೆಚ್ಚಾಗುತ್ತಿರುವ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ವೃದ್ಧಿಸುವ ಸಲುವಾಗಿ ಗಮನ ಹರಿಸಲು ಭಾರತ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಬುಧವಾರ ಮಾತುಕತೆ ನಡೆಸಿದವು. ತ್ರಿಸದಸ್ಯ ದೇಶಗಳು ಇದೇ ಮೊದಲ ಬಾರಿಗೆ ಪರಸ್ಪರ ಸಹಕಾರ ಸಭೆಯನ್ನು ನಡೆಸಿವೆ.
ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗಾಲಾ, ಯುರೋಪ್ ಫ್ರೆಂಚ್ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಹಾಗೂ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಫ್ರಾನೋಯಿಸ್ ಡೆಲಾಟ್ರೆ ಮತ್ತು ಆಸ್ಟ್ರೇಲಿಯಾ ವಿದೇಶಾಂಗ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಫ್ರಾನ್ಸಸ್ ಆಡಮ್ಸನ್ ಆನ್‌ಲೈನ್ ಸಭೆಯಲ್ಲಿ ಪಾಲ್ಗೊಂಡರು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ವೃದ್ಧಿಯ ಕುರಿತಾಗಿ ಮಾತುಕತೆಯನ್ನು ಕೇಂದ್ರೀಕರಿಸಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ. ಇದು ಫಲಿತಾಂಶ ಉದ್ದೇಶಿತ ಸಭೆಯಾಗಿತ್ತು. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಭದ್ರತೆ, ಸಮೃದ್ಧಿಯನ್ನು ಪರಸ್ಪರ ಬಲಪಡಿಸುವ ಕಾರ್ಯಕ್ಕೆ ಮುಂದಾಗಲು ಅಗತ್ಯವಾದ ಗಟ್ಟಿಯಾದ ಒಪ್ಪಂದವನ್ನು ಮಾಡಿಕೊಳ್ಳಲು ಮೂರು ದೇಶಗಳು ಮಾತುಕತೆ ನೆಡೆಸಿದವು.
ಪ್ರತಿ ವರ್ಷವೂ ಮಾತುಕತೆಯನ್ನು ಆಯೋಜಿಸಲು ಮೂರೂ ದೇಶಗಳು ಒಪ್ಪಿಕೊಂಡಿವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆರ್ಥಿಕ ಮತ್ತು ಭೂಕಾರ್ಯತಂತ್ರ ಸವಾಲುಗಳು ಹಾಗೂ ಸಹಕಾರದ ಬಗ್ಗೆ ಚರ್ಚಿಸಿದವು. ಮುಖ್ಯವಾಗಿ ಕೊರೊನಾ ವೈರಸ್ ಪಿಡುಗು ಹಾಗೂ ಈ ಬಿಕ್ಕಟ್ಟಿಗೆ ಆಂತರಿಕ ಪ್ರತಿಕ್ರಿಯೆಗಳನ್ನು ಸಮಾಲೋಚಿಸಲಾಯಿತು.
ಬಹುರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಮತ್ತು ಸುಧಾರಿಸುವ ಅತ್ಯುತ್ತಮ ಮಾರ್ಗಗಳನ್ನು ಕಂಡುಕೊಳ್ಳುವುದು ಸೇರಿದಂತೆ, ಆದ್ಯತೆಗಳು, ಸವಾಲುಗಳು ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಬಹುರಾಷ್ಟ್ರೀಯ ಸಂಸ್ಥೆಗಳ ಬೆಳವಣಿಗೆಗಳ ವಿನಿಯಮಕ್ಕೆ ಮೂರೂ ದೇಶಗಳು ಸಹಮತಿ ನೀಡಿದವು.