ನವದೆಹಲಿ: 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಲು ಅಂದಿನ ಬಿಜೆಪಿ ನಾಯಕರಾದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮೊದಲಾದವರು ಪಿತೂರಿ ನಡೆಸಿದ್ದರೆ? ಈ ಬಗ್ಗೆ ಲಕ್ನೊದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಲಿದ್ದು ಇದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಪಾಲಿಗೂ ಮಹತ್ವದ್ದಾಗಿದೆ.
ಅಂದು ಸಂಸದರಾಗಿದ್ದ ಎಲ್ ಕೆ ಅಡ್ವಾಣಿ, ಬಾಬ್ರಿ ಮಸೀದಿ ಧ್ವಂಸ ಮಾಡುವ ಮೊದಲು ಕರ ಸೇವಕರ ಮುಂದೆ ಭಾಷಣ ಮಾಡಿದರು, ಇದರಿಂದ 1990ರ ಆರಂಭದಲ್ಲಿ ರಥ ಯಾತ್ರೆ ನಡೆಸಲಾಯಿತು. ಆ ಸಮಯದಲ್ಲಿ ಮುರಳಿ ಮನೋಹರ ಜೋಷಿ ಬಿಜೆಪಿ ಅಧ್ಯಕ್ಷರಾಗಿದ್ದರು. ಬಾಬ್ರಿ ಮಸೀದಿ ಧ್ವಂಸ ಸಮಯದಲ್ಲಿ ಅವರು ಕೂಡ ಸ್ಥಳದಲ್ಲಿದ್ದು ಕರ ಸೇವಕರನ್ನುದ್ದೇಶಿಸಿ ಮಾತನಾಡಿದ್ದರು. ಉಮಾ ಭಾರತಿಯವರು ಕೂಡ ಇದ್ದರು.
ಆ ಕಾಲದಲ್ಲಿ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು. ಮಸೀದಿ ಧ್ವಂಸ ಮಾಡಲು ಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಬರೆದು ಕೊಟ್ಟಿದ್ದರು ಕಲ್ಯಾಣ್ ಸಿಂಗ್. ಲೆಬೆರಾನ್ ಆಯೋಗ, ಉಮಾ ಭಾರತಿಯವರು ಕರ ಸೇವಕರಿಗೆ ಮಸೀದಿ ಧ್ವಂಸ ಮಾಡಲು ಪ್ರೇರಣೆ ನೀಡಿದರು ಎಂದು ಆರೋಪಿಸಿತು. ನಂತರ ಉಮಾ ಭಾರತಿಯವರು ಬಾಬ್ರಿ ಮಸೀದಿ ಧ್ವಂಸದ ನೈತಿಕ ಹೊಣೆ ಹೊತ್ತುಕೊಂಡರು.
ಆ ಸಂದರ್ಭದಲ್ಲಿ ವಿನಯ್ ಕತಿಯಾರ್ ಭಜರಂಗದಳ ಮುಖ್ಯಸ್ಥರಾಗಿದ್ದರು. 1992ರಲ್ಲಿ ಫೈಜಾಬಾದ್ ನಲ್ಲಿ ಬಿಜೆಪಿ ಸಂಸದರಾಗಿದ್ದರು. ಅವರ ಕ್ಷೇತ್ರದಲ್ಲಿಯೇ ಬಾಬ್ರಿ ಮಸೀದಿ ಧ್ವಂಸ ಮಾಡಲು ಈ ಎಲ್ಲಾ ನಾಯಕರು ಸೇರಿ ಪಿತೂರಿ ನಡೆಸಿದ್ದರು ಎಂಬ ಆರೋಪಗಳಿವೆ.