ಕುಂಬಳೆ: ಇಂದು(ಸೆ.18) ಹೊಸಂಗಡಿ ದುರ್ಗಿಪಳ್ಳದಲ್ಲಿ ನಡೆಯಲಿರುವ ತುಳು ಅಕಾಡೆಮಿ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ವಂಚನೆ ಆರೋಪ ಹೊತ್ತಿರುವ ಶಾಸಕ ಖಮರುದ್ದೀನ್ ಅವರನ್ನು ಆಮಂತ್ರಿಸಿರುವುದು ಸಮಸ್ತ ತುಳುವರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಅವರು ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೇವಲ ಶಿಷ್ಟಾಚಾರದ ಕಾರಣ ಮುಂದಿಟ್ಟು ಶಾಸಕರಿಗೆ ಆಮಂತ್ರಣ ನೀಡಿರುವುದು ಸರಿಯಲ್ಲ. ಶಾಸಕರ ವಿರುದ್ಧ ಹಲವಾರು ಮಂದಿ ವಂಚನೆ ದೂರು ನೀಡಿದ್ದು, ಇದನ್ನು ಪರಿಗಣಿಸಿ ಹಾಗೂ ಸ್ಥಳೀಯರ ಭಾವನೆಗಳನ್ನು ಗೌರವಿಸಿ ಶಾಸಕರನ್ನು ಈ ಕಾರ್ಯಕ್ರಮದಿಂದ ದೂರ ಇರಿಸಬೇಕಾಗಿತ್ತು. ಅಲ್ಲದೆ ಬಿಜಿಪಿಯು ಶಾಸಕರ ವಿರುದ್ಧ ನಿರಂತರ ಪ್ರತಿಭಟನೆ ಮಾಡುತ್ತಿದೆ. ಆದರೂ ಶಾಸಕರಿಗೆ ಈ ಕಾರ್ಯಕ್ರಮದಲ್ಲಿ ಅವಕಾಶ ನೀಡಿರುವುದು ತುಳುವರು ಮತ್ತು ಮಂಜೇಶ್ವರದ ಜನರಿಗೆ ಮಾಡಿರುವ ಅವಮಾನವಾಗಿದೆ.
ಬಿಜೆಪಿ ಯಾವತ್ತೂ ತುಳುವರ ಭಾವನೆ ಮತ್ತು ಸ್ವಾಭಿಮಾನದ ಗೌರವವನ್ನು ಎತ್ತಿ ಹಿಡಿಯುತ್ತದೆ. ಆದ್ದರಿಂದ ವಂಚನೆ ಆರೋಪ ಹೊತ್ತಿರುವ ಶಾಸಕರು ಭಾಗವಹಿಸುವ ಈ ಕಾರ್ಯಕ್ರಮವನ್ನು ಬಿಜೆಪಿ ಬಹಿಷ್ಕರಿಸಲು ನಿರ್ಧರಿಸಿದೆ. ತುಳುವರು ಯಾವತ್ತೂ ಸ್ವಾಭಿಮಾನಿಗಳು ಹಾಗೂ ಪ್ರಾಮಾಣಿಕರು ಎ0ಬುದನ್ನು ಬಿಜಿಪಿ ಈ ಮೂಲಕ ತೋರಿಸಿ ಕೊಡಲಿದೆ ಎಂದು ಮಣಿಕಂಠ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.