ಮಾಹಾಮಾರಿ ಕರೋನಾ ವೈರಸ್ ಪರಿಣಾಮ ಬಹುತೇಕ ಆಟೋ ಕಂಪನಿಗಳು ಭಾರೀ ನಷ್ಟ ಅನುಭವಿಸಿದ್ದು, ಲಾಕ್‌ಡೌನ್ ವಿನಾಯ್ತಿ ನಂತರವೂ ಹೊಸ ವಾಹನಗಳ ಮಾರಾಟ ಪ್ರಮಾಣದಲ್ಲಿ ತುಸು ಹೆಚ್ಚಳ ಕಂಡುಬಂದಿದ್ದರೂ ಆರ್ಥಿಕ ಮುಗ್ಗಟ್ಟು ಆಟೋ ಕಂಪನಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವಂತೆ ಮಾಡಿದೆ.
ಸದ್ಯ ವೈರಸ್ ಭೀತಿ ಹೆಚ್ಚಳದ ನಡುವೆಯೂ ಹೊಸ ಸುರಕ್ಷಾ ಮಾರ್ಗಸೂಚಿಗಳೊಂದಿಗೆ ವ್ಯಾಪಾರ ವಹಿವಾಟು ಕೈಗೊಂಡಿರುವ ಆಟೋ ಕಂಪನಿಗಳು ಕನಿಷ್ಠ ಪ್ರಮಾಣದ ವಾಹನ ಮಾರಾಟ ಪ್ರಮಾಣವನ್ನು ದಾಖಲಿಸಿದ್ದು, ಬಹುತೇಕ ವಾಹನಗಳ ಮಾರಾಟದಲ್ಲಿ ಶೇ.15ರಿಂದ ಶೇ.40ರಷ್ಟು ಕುಸಿತ ಕಂಡುಬಂದಿದೆ. ಸದ್ಯ ವೈರಸ್ ಭೀತಿ ಹಿನ್ನಲೆಯಲ್ಲಿ ಹೊಸ ವಾಹನಗಳ ಮಾರಾಟ ಪ್ರಕ್ರಿಯೆಯು ಮುಂಬರುವ ದಿನಗಳಲ್ಲಿ ಹೆಚ್ಚಳವಾಗುವ ನೀರಿಕ್ಷೆಯಿದ್ದು, ಆಟೋ ಉದ್ಯಮ ಸುಧಾರಣೆಗಾಗಿ ತಾತ್ಕಾಲಿಕ ಪರಿಹಾರ ನೀಡುವಂತೆ ಆಟೋ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿವೆ.
ಕರೋನಾ ಮಹಾಮಾರಿಯಿಂದಾಗಿ ಕೇವಲ ಆಟೋ ಉದ್ಯಮದಲ್ಲಿ ಮಾತ್ರವಲ್ಲ ಎಲ್ಲಾ ವಾಣಿಜ್ಯ ವಹಿವಾಟಿನಲ್ಲೂ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಒಂದು ಹೊಸ ಸವಾಲಾಗಿ ಪರಿಣಮಿಸಿರುವುದು ಹೊಸ ವಾಹನ ಮಾರಾಟದಲ್ಲಿ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.
ಸದ್ಯ ತೀವ್ರ ಕುಸಿತ ಕಂಡಿರುವ ಹೊಸ ವಾಹನಗಳ ಮಾರಾಟವು ಮತ್ತೆ ಮೊದಲಿನಂತೆ ಚೇತರಿಸಿಕೊಳ್ಳಲು ತುಸು ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ತಜ್ಞರ ಪ್ರಕಾರ ವಾಹನ ಮಾರಾಟವು ಮೊದಲಿನ ಸ್ಥಿತಿಗೆ ಬರಲು ಕನಿಷ್ಠ 2 ರಿಂದ 3 ವರ್ಷ ಬೇಕಾಗಬಹುದೆಂದು ಅಂದಾಜಿಸಿದ್ದಾರೆ.ಭಾರತೀಯ ಆಟೋ ಮೊಬೈಲ್ ಉದ್ಯಮ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುತ್ತಿರುವ SIAM(ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ಸ್) ಸಂಘವು ಕೂಡಾ ಇದೇ ಅಂಶದ ಮೇಲೆ ಕಳವಳ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಲ್ಲಿಸಿದೆ.