ಪೆರ್ಲ: ಕಳೆದ ಮಾರ್ಚ್ ತಿಂಗಳಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಸೋಂಕು ವ್ಯಾಪಕಗೊಳ್ಳದಂತೆ ಕೇಂದ್ರ ಸರ್ಕಾರ ದೇಶ ವ್ಯಾಪಕವಾಗಿ ಹೇರಿದ ಲಾಕ್ ಡೌನ್ ಬಳಿಕ ಸೋಮವಾರ ಮೊದಲ ಬಾರಿಗೆ ಅಂತರ್ ರಾಜ್ಯ ಬಸ್ ಸಂಚಾರ ಆರಂಭಗೊಂಡಿತು.
ಪೆರ್ಲದಿಂದ ವಿಟ್ಲಕ್ಕೆ ಸಂಚಾರ ನಡೆಸುತ್ತಿದ್ದ ಖಾಸಗೀ ಬಸ್ (ಅರುಣ್ ಟ್ರಾವೆಲ್ಸ್) ಮತ್ತು(ಹೋನೆಸ್ಟ್) ಸೋಮವಾರ ಬೆಳಿಗ್ಗೆ ಮೊದಲ ಸಂಚಾರಕ್ಕೆ ಚಾಲನೆ ನೀಡಿತು. ಇದರೊಂದಿಗೆ ಕಳೆದ ಆರು ತಿಂಗಳುಗಳಿಂದ ಅಂತರ್ ರಾಜ್ಯ ಬಸ್ ಸಂಚಾರದ ನಿಯಂತ್ರಣಕ್ಕೆ ಕೊನೆಗೂ ಮುಕ್ತಿ ಲಭ್ಯವಾದಂತಾಯಿತು.
ಯಾಕೀ ವಿಶೇಷ!!?
ಕೇಂದ್ರ ಸರ್ಕಾರ ಅನ್ ಲಾಕ್ ಸಡಿಲಿಕೆಗಳ ಮೂಲಕ ಕೋವಿಡ್ ನಿಂದುಂಟಾದ ಅಪಾರ ಪ್ರಮಾಣದ ಹಾನಿಗಳಿಗೆ ನಿಧಾನವಾಗಿ ಚೇತರಿಕೆಗೆ ಯತ್ನಿಸುತ್ತಿದೆ. ಆದರೆ ಅನ್ ಲಾಕ್ ಆರಂಭಗೊಂಡರೂ ಗಡಿನಾಡು ಕಾಸರಗೋಡು ಮತ್ತು ದಕ್ಷಿಣ ಕನ್ನಡಕ್ಕೆ ಸಂಚಾರ ನಡೆಸಲು ಜಿಲ್ಲಾಡಳಿತಗಳು ಅನುಮತಿ ನೀಡಿರಲಿಲ್ಲ. ಇದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವುದು ಮುಂದುವರಿದಿದ್ದು, ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಅನ್ ಲಾಕ್ 3 ರ ಕೊನೆಯ ಹಂತದಲ್ಲಿ ಕಾಸರಗೋಡು ಜನರ ಆಗಮನಕ್ಕೆ ಅನುಮತಿ ನೀಡಿತ್ತು. ಆದರೆ ಕಾಸರಗೋಡು ಜಿಲ್ಲಾಡಳಿತ ನಿರ್ಬಂಧಗಳನ್ನು ಯಥಾಸ್ಥಿತಿ ಮುಂದುವರಿಸಿತ್ತು. ಬಳಿಕ ಜನಸಾಮಾನ್ಯರು, ರಾಜಕೀಯ ಪಕ್ಷಗಳ ಪ್ರತಿಭಟನೆಗಳಿಗೆ ಮಣಿದು ಕೆಲವು ದಿನಗಳ ಹಿಂದೆಯಷ್ಟೇ ನಿಬಂಧನೆಗಳ ಅಲ್ಪ ಸಡಿಲಿಕೆಗಳೊಂದಿಗೆ ಸಂಚಾರ ಅನುಮತಿ ನೀಡಿದ್ದರೂ ಬಸ್ ಸೇವೆಗಳು ಆರಂಭಗೊಂಡಿರಲಿಲ್ಲ.
ಈ ಮಧ್ಯೆ ಸೋಮವಾರದಿಂದ ಪೆರ್ಲದಿಂದ ವಿಟ್ಲಕ್ಕೆ ಖಾಸಗೀ ಬಸ್ ಸಂಚಾರ ಆರಂಭಿಸಿರುವುದು ಜನಸಾಮಾನ್ಯರ ಉಲ್ಲಾಸಕ್ಕೆ ಕಾರಣವಾಗಿದೆ. ಮೊದಲ ದಿನವಾಗಿದ್ದರಿಂದ ಬೆಳಿಗ್ಗೆ ಒಂದೇ ಸಂಚಾರ ಮಾತ್ರ ನಡೆಸಿತ್ತೆಂದು ತಿಳುದುಬಂದಿದೆ.