HEALTH TIPS

ಇನ್ನೂ ತೆರೆಯದ ಸ್ವರ್ಗದ ಬಾಗಿಲು!!-ತೀವ್ರಗೊಳ್ಳುತ್ತಿರುವ ಪ್ರತಿರೋಧ

    

    ಪೆರ್ಲ: ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿರುವ ಅಂತರ್ ರಾಜ್ಯ ರಸ್ತೆಗಳು ಸಾರ್ವಜನಿಕರ, ರಾಜಕೀಯ ಪಕ್ಷಗಳ ಸತತ ಹೋರಾಟದ ತರುವಾಯ ಇದೀಗ ಮುಕ್ತ ಸಂಚಾರಕ್ಕೆ ತೆರೆದುಕೊಂಡಿದ್ದರೂ, ಸ್ವರ್ಗದ ಬಾಗಿಲು ಇನ್ನೂ ತೆರೆದುಕೊಂಡಿಲ್ಲ!

     ಎಣ್ಮಕಜೆ ಗ್ರಾ.ಪಂ. ವ್ಯಾಪ್ತಿಯ ಹಿಂದುಳಿದ ಗಡಿ ಗ್ರಾಮ ಸ್ವರ್ಗದಲ್ಲಿ ರಸ್ತೆಗೆ ಅಡಲಾಗಿ ನಿರ್ಮಿಸಿರುವ  ಬ್ಯಾರಿಕೇಡ್ ಇನ್ನೂ ತೆರೆಯದೆ ಈ ಪ್ರದೇಶದ ನೂರಾರು ಜನರು ಇನ್ನೂ ಸಂಕಷ್ಟ ಅನುಭವಿಸುತ್ತಿದ್ದಾರೆ.

      ಸ್ವರ್ಗ-ಪಾಣಾಜೆ ರಸ್ತೆಗೆ ಲಾಕ್ ಡೌನ್ ಕಾಲದಲ್ಲಿ ಹಾಕಲಾಗಿದ್ದ ರಸ್ತೆ ನಿಯಂತ್ರಣದ ಬ್ಯಾರಿಕೇಡ್ ಬುಧವಾರದಿಂದ ತೆರೆಯಲ್ಪಡುವ ಅಂತರ್ ರಾಜ್ಯ ಗಡಿ ವಿಷಯದಲ್ಲಿ ಇಲ್ಲದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಸ್ವರ್ಗ ಜಂಕ್ಷನ್ ನಲ್ಲಿಯೇ ನಿಯಂತ್ರಕ ಬ್ಯಾರಿಕೇಡ್ ಹಾಕಲಾಗಿದ್ದು ಅದರಾಚೆ ಕೇರಳದ್ದೇ ಆಡಳಿತಕ್ಕೊಳಪಟ್ಟ ಗ್ರಾಮ ಕಚೇರಿ, ಪಡಿತರ ಅಂಗಡಿಗಳಂತಹ ಅತಿ ಅಗತ್ಯ ಕಾರ್ಯಾಲಯಗಳಿದ್ದು ಅತ್ತಿತ್ತ ತೆರಳಲು ರಸ್ತೆ ನಿಯಂತ್ರಕ ಭಾರೀ ಅಡಚಣೆಯಾಗುತ್ತಿದೆ. ಅಂತರ್ ರಾಜ್ಯ ಮುಚ್ಚಲ್ಪಟ್ಟ ಗಡಿಗಳನ್ನು ತೆರೆಯಬೇಕೆಂದು ಕೇಂದ್ರ ಸರ್ಕಾರ ಹಾಗೂ ಕೇರಳ ಉಚ್ಚ ನ್ಯಾಯಾಲಯದ ಆದೇಶವಿದ್ದರೂ ಕಾಸರಗೋಡು ಜಿಲ್ಲಾಡಳಿತ ಗಡಿನಾಡಿನ ಜನತೆಯನ್ನು ಸತಾಯಿಸುತ್ತಿದ್ದು ಭಾರೀ ಜನಾಂದೋಲನ ರೂಪುಗೊಂಡ ಹಿನ್ನೆಲೆಯಲ್ಲಿ ಬುಧವಾರದಿಂದ ಗತ್ಯಂತರವಿಲ್ಲದೆ ಅಂತರಾಜ್ಯ ಪ್ರಯಾಣ ನಿಂತ್ರಣಗಳನ್ನು ಹಿಂಪಡೆದಿತ್ತು. ಆದರೆ ಈರೀತಿ ನಿಯಂತ್ರಣ ಹಿಂತೆಗೆಯುವಾಗ ಸ್ವರ್ಗ ಗಡಿಯ ನಿಯಂತ್ರಣಗಳನ್ನು ಯಥಾ ಸ್ಥಿತಿ ಮುಂದುವರಿಸಿರುವುದು ಗ್ರಾಮೀಣ ಪ್ರದೇಶದ ಜನಸಾಮಾನ್ಯರನ್ನು ವಂಚಿಸುವ ಆಡಳಿತಾಧಿಕಾರಿಗಳ ಕುತ್ಸಿತ ಮನೋಸ್ಥಿತಿಯ ಪ್ರತೀಕವೆಂಬುದು ಇದೀಗ ವೇದ್ಯವಾಗಿದೆ.


    ಕರ್ನಾಟಕದೊಂದಿಗೆ ಹಂಚಿಕೊಂಡಿರುವ 1.5 ಕಿಲೋಮೀಟರ್ ದೂರದ ಸ್ವರ್ಗ ಪೆಟೆಯಲ್ಲಿ ಬ್ಯಾರಿಕೆಡ್ ನಿರ್ಮಿಸಿರುವುದೇ ವ್ಯವಸ್ಥಿತ ಕ್ರಮವಲ್ಲ ಎಂಬ ಮಾತು ಈ ಹಿಂದೆಯೇ ಕೇಳಿಬಂದಿತ್ತು. ಸ್ವರ್ಗದಿಂದ 6 ಕಿಲೋಮೀಟರ್ ದೂರದ ಕಾಟುಕುಕ್ಕೆಗೆ ಇದೀಗ 15 ಕಿಲೋಮೀಟರ್ ಗಳಷ್ಟು ಸತ್ತು ಬಳಸಿ ಜನರು ತೆರಳಬೇಕಾಗುತ್ತಿದ್ದು ಇಂತಹ ಅಪಸವ್ಯಗಳಿಗೆ ಮತ್ತು ನಷ್ಟಗಳಿಗೆ ಪರಿಹಾರ ಒದಗಿಸುವವರಾರು ಎನ್ನುವುದೇ ತಿಳಿಯದಾಗಿದೆ.  

        ಇಂದು ಉಗ್ರ ಹೋರಾಟ-ಗೇಟ್ ಮುರಿಯುವ ಸೂಚನೆ:

    ಇನ್ನೂ ತೆರೆಯದಿರುವ ಸ್ವರ್ಗದ ಗಡಿಯನ್ನು ಮುಕ್ತಗೊಳಿಸಬೇಕೆಂದು ಆಗ್ಹಿಸಿ ಇಂದು ಬೆಳಿಗ್ಗೆ 10 ರಿಂದ ಸ್ವರ್ಗದಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಬಗ್ಗೆ  ಸ್ವರ್ಗ ಪರಿಸರದ ಬಿಜೆಪಿ ಕಾರ್ಯಕರ್ತರು ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಜಿಲ್ಲಾಡಳಿತಕ್ಕೆ ಬಿಸಿಮುಟ್ಟಿಸಿದ್ದು, ಅಧಿಕೃತರು ಕಣ್ಣುತೆರೆಯುವರೇ ಎಂದು ಕಾದು ನೋಡಬೇಕಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries