ನವದೆಹಲಿ: ನಾಲ್ಕನೇ ಹಂತದ ಅಲ್ಲಾಕ್ ಅಂತ್ಯಗೊಳ್ಳುತ್ತಿದೆ. ಸೆ. 30ರ ನಂತರದ ಐದನೇ ಹಂತದ ಲಾಕ್ಡೌನ್ ಸಡಿಲಿಕೆ ಹೇಗಿರುತ್ತದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸಭೆ ನಡೆಸುತ್ತಿದ್ದಾರೆ. ಕರ್ನಾಟಕ ಅಲ್ಲದೆ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ದೆಹಲಿ ಮತ್ತು ಪಂಜಾಬ್ ರಾಜ್ಯಗಳ ಸಿಎಂಗಳು ಆನ್ಲೈನ್ನಲ್ಲಿ ನಡೆಯುವ ಈ ಸಭೆಯಲ್ಲಿ ಪ್ರಧಾನಿ ಜೊತೆ ಸಂವಾದ ನಡೆಸಲಿದ್ದಾರೆ. ದೇಶದಲ್ಲಿ ಕೊರೋನಾ ಪ್ರಕರಣಗಳು ಅತಿ ಹೆಚ್ಚು ಇರುವುದು ಈ ಏಳು ರಾಜ್ಯಗಳಲ್ಲೇ. ದೇಶದ ಶೇ. 63ರಷ್ಟು ಪ್ರಕರಣಗಳು ಈ ಏಳು ರಾಜ್ಯಗಳಲ್ಲೇ ಇವೆ. ಈ ಹಿನ್ನೆಲೆಯಲ್ಲಿ ಪ್ರಧಾನಿಗಳು ಈ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ವಾಸ್ತವ ಪರಿಸ್ಥಿತಿ ಹಾಗೂ ಸಹಾಯ ಅಗತ್ಯತೆ ಬಗ್ಗೆ ವಿಚಾರಿಸುವ ಸಾಧ್ಯತೆ ಇದೆ.
ಕೊರೋನಾ ನಿಯಂತ್ರಣದಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ವಿವಿಧ ಸ್ತರಗಳಲ್ಲಿ ಸಹಕಾರ ನೀಡುತ್ತಾ ಬಂದಿದೆ. ಅಗತ್ಯ ಇರುವ ರಾಜ್ಯಗಳಿಗೆ ತನ್ನ ತಂಡಗಳನ್ನ ಕಳುಹಿಸಿ ನೆರವು ಒದಗಿಸುತ್ತಿದೆ. ರೋಗ ನಿಯಂತ್ರಣ, ಪರೀಕ್ಷೆ, ವೈದ್ಯಕೀಯ ನಿರ್ವಹಣೆ ಇತ್ಯಾದಿ ವಿಚಾರಗಳಲ್ಲಿ ರಾಜ್ಯಗಳಿಗೆ ಕೇಂದ್ರ ಸಹಾಯ ಮಾಡುತ್ತಿದೆ. ಜಮ್ಮು-ಕಾಶ್ಮೀರ ರಾಜ್ಯಕ್ಕೆ ಇತ್ತೀಚೆಗೆ ಕೇಂದ್ರದ ಒಂದು ತಂಡ ಹೋಗಿದೆ. ದೆಹಲಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಜಂಟಿಯಾಗಿ ಕೊರೋನಾ ಪರಿಸ್ಥಿತಿ ನಿಭಾಯಿಸುತ್ತಿವೆ. ಈಗ ಕೊರೋನಾ ಅತಿ ಹೆಚ್ಚು ಇರುವ ಏಳು ರಾಜ್ಯಗಳಲ್ಲಿ ಮುಂದೆ ಯಾವ ಕಾರ್ಯತಂತ್ರ ಅನುಸರಿಸಬಹುದು, ಯಾವ್ಯಾವ ರೀತಿಯ ನೆರವಿನ ಅಗತ್ಯ ಇದೆ ಎಂಬುದನ್ನು ಪ್ರಧಾನಿಗಳು ಇಂದು ಸಮಾಲೋಚಿಸಲಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ದಾಖಲಾಗಿರುವ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 56 ಲಕ್ಷ ದಾಟಿ ಹೋಗಿದೆ. ಸಾವಿನ ಸಂಖ್ಯೆ 90 ಸಾವಿರ ಗಡಿ ದಾಟಿದೆ. ಆದರೆ, ಅದೃಷ್ಟಕ್ಕೆ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಯವರೆಗೆ 45 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ನಿಂದ ಚೇತರಿಸಿಕೊಂಡಿರುವುದು ಕೇಂದ್ರ ಆರೋಗ್ಯ ಇಲಾಖೆ ನೀಡಿದ ಮಾಹಿತಿಯಿಂದ ತಿಳಿದುಬರುತ್ತದೆ. ಈಗ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 9.68 ಲಕ್ಷ ಇದೆ. ಇಲ್ಲಿ ಸಕ್ರಿಯ ಪ್ರಕರಣಗಳೆಂದರೆ ಈಗ ಸೋಂಕು ಹೊಂದಿರುವ ಪ್ರಕರಣಗಳಾಗಿವೆ.
ಸಕ್ರಿಯ ಪ್ರಕರಣಗಳು ಹೆಚ್ಚಿರುವ ರಾಜ್ಯಗಳು:
1) ಮಹಾರಾಷ್ಟ್ರ 2,72,809
2) ಕರ್ನಾಟಕ 93,1723) ಆಂಧ್ರ ಪ್ರದೇಶ 71,465
4) ಉತ್ತರ ಪ್ರದೇಶ 63,148
5) ತಮಿಳುನಾಡು 46,350
6) ಕೇರಳ 40,453
7) ಒಡಿಶಾ 34,377
8) ದೆಹಲಿ 31,623
9) ತೆಲಂಗಾಣ 29,873
10) ಅಸ್ಸಾಮ್ 29,857
11) ಪಶ್ಚಿಮ ಬಂಗಾಳ 24,971
12) ಮಧ್ಯ ಪ್ರದೇಶ 22,646
13) ಜಮ್ಮು ಕಾಶ್ಮೀರ 21,485
14) ಪಂಜಾಬ್ 21,288