ಕಾಸರಗೋಡು: ಕೇರಳದ ಉನ್ನತ ಶಿಕ್ಷಣ ಖಾತೆ ಸಚಿವ ಹಾಗೂ ಮಂಜೇಶ್ವರ ಶಾಸಕರ ರಾಜೀನಾಮೆಗೆ ಆಗ್ರಹಿಸಿ ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆ ಅಕ್ಷರಶ: ನಾರೀಶಕ್ತಿಯನ್ನು ಅನಾವರಣಗೊಳಿಸಿತು.
ಠೇವಣಿದಾರರಿಗೆ ವಂಚಿಸಿದ ಶಾಸಕ ಎಂ.ಸಿ ಕಮರುದ್ದೀನ್ ಹಾಗೂ ಚಿನ್ನ ಸಾಗಾಟ ಪ್ರಕರಣದಲ್ಲಿ ಇಡಿ ಯಿಂದ ತನಿಖೆಗೊಳಲಾಗಿರುವ ಸಚಿವ ಕೆ.ಟಿ ಜಲೀಲ್ ತಕ್ಷಣ ರಾಜೀನಾಮೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಸರ್ಕಾರಿ ಕಾಲೇಜು ವಠಾರದಿಂದ ನೂರಾರು ಮಂದಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪೊಲೀಸರು ಮೆರವಣಿಗೆಗೆ ತಡೆಯೊಡ್ಡಿದ್ದರು. ಈ ಸಂದರ್ಭ ಕಾರ್ಯಕರ್ತರು ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಮೇಲೇರಿ ಕಚೇರಿಗೆ ನುಗ್ಗಲೆತ್ನಿಸಿ ತಮ್ಮ ಪ್ರತಿಭಟನೆ ಮುಂದುವರಿಸಿದರು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯೆ ಪ್ರಮಿಳಾ ಸಿ.ನಾಯ್ಕ್ ಧರಣಿ ಉದ್ಘಾಟಿಸಿದರು. ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ. ಜನನಿ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ರೂಪವಾಣಿ ಆರ್.ಭಟ್, ಪುಷ್ಪಾ ಅಮೆಕ್ಕಳ, ಸವಿತಾ ಟೀಚರ್, ಬಿಜೆಪಿ ಜಿಲ್ಲಾ ಸಮಿತಿ ಮುಖಂಡರಾದ ಎ.ವೇಲಾಯುಧನ್, ಸುಧಾಮ ಗೋಸಾಡ, ವಕೀಲ ಸದಾನಂದ ರೈ ಸಹಿತ ಹಲವಾರು ಮಂದಿ ಮುಖಂಡರು ನೇತೃತ್ವ ನೀಡಿದರು.