*
ಮಂಗಳೂರು: 'ಯಕ್ಷಗಾನಕ್ಕಾಗಿ ರಾಜಾಶ್ರಯ ನೀಡಿದ ಶ್ರೀಮದ್ ಎಡನೀರು ಮಠ ನಾಡಿನ ವಿಶಿಷ್ಟ ಧಾರ್ಮಿಕ ಸಾಂಸ್ಕೃತಿಕ ಕೇಂದ್ರಗಳಲ್ಲೊಂದು. ಎಡನೀರು ಶ್ರೀಪಾದರು ತಮ್ಮ ಬದುಕಿನುದ್ದಕ್ಕೂ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಶ್ರೇಷ್ಠ ಸಂತ. ಯಕ್ಷಗಾನ ಮತ್ತು ಸಂಗೀತ ಅವರ ಜೀವನಾಡಿ. ಸ್ವತ: ಕಲಾವಿದರಾಗಿ ಕಲೆ ಮತ್ತು ಕಲಾವಿದರನ್ನು ಪೋಷಿಸುತ್ತಿದ್ದ ಅವರು ನಾಡಿನಾದ್ಯಂತ ಸಂಚರಿಸಿ ಮಠದ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ' ಎಂದು ಹಿರಿಯ ಅರ್ಥಧಾರಿ ಮತ್ತು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.
ತುಳು ವರ್ಲ್ಡ್ (ರಿ.) ಕುಡ್ಲ ಇವರು ಇತ್ತೀಚೆಗೆ ವಿಷ್ಣುಪಾದ ಸೇರಿದ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ ಅವರಿಗೆ ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಡಾ.ಜೋಶಿ ನುಡಿನಮನ ಸಲ್ಲಿಸಿ ಮಾತನಾಡಿದರು.
ಶಕ್ತಿನಗರ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಸಿ. ನಾಯ್ಕ್ , ಯಕ್ಷಾಂಗಣ ಮಂಗಳೂರು ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಮುಂಬಯಿ ಕಲಾಜಗತ್ತು ರೂವಾರಿ ತೋನ್ಸೆ ವಿಜಯಕುಮಾರ್ ಶೆಟ್ಟಿ, ಉಪನ್ಯಾಸಕ ಅರುಣ್ ಕುಮಾರ್ ಉಳ್ಳಾಲ , ಮಂದಾರ ರಾಜೇಶ್ ಭಟ್, ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ, ಕರ್ನಾಟಕ ಜಾನಪದ ಪರಿಷತ್ತು ದ.ಕ. ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್,ದೇವಳದ ಆಡಳಿತಾಧಿಕಾರಿ ಕೃಷ್ಣ ಕುಮಾರ್, ಯಕ್ಷಗಾನ ಕಲಾವಿದ ಗುರುಪ್ರಸಾದ್ ಬೊಳಿಂಜಡ್ಕ, ಮಹಿಳಾ ಭಾಗವತೆ ಕಾವ್ಯಶ್ರೀ ಅಜೇರು, ಮಂದಾರ ಶಾರದಾಮಣಿ, ರಾಜೇಶ್ ಹೆಗಡೆ ಪೊಲಳಿ ಮತ್ತಿತರರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.