ಮಂಜೇಶ್ವರ: ಆಯಾ ರಾಜ್ಯಗಳು ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕಾದದು ಅಗತ್ಯವಾಗಿದ್ದರೂ ಗಡಿನಾಡಿಗೆ ಸಂವಿಧಾನ ವಿಶೇಷವಾಗಿ ಮಾನ್ಯತೆ ನೀಡಿರುವ ತೀರ್ಪಿಗೆ ವಿರುದ್ದವಾಗಿ ಮಾನವಹಕ್ಕು ಆಯೋಗ ನೀಡಿರುವ ತೀರ್ಪನ್ನು ಖಂಡಿಸಿ ಗಡಿನಾಡ ಕನ್ನಡಿಗರ ಸಂವಿಧಾನ ಬದ್ದ ಹಕ್ಕು ಸಂರಕ್ಷಣೆಗೆ ಕಾನೂನು ಪಾಲಿಸುವಂತೆ ಆಗ್ರಹಿಸಲು ಸಂಬಂಧಪಟ್ಟವರನ್ನು ಒತ್ತಾಯಿಸಲಾಗಿದೆ.
ಮೂಡಂಬೈಲು ಸರ್ಕಾರಿ ಶಾಲೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘ, ಶಿಕ್ಷಕ ವೃಂದ ಹಾಗೂ ಕಾಸರಗೋಡು ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ಗುರುವಾರ ನಡೆದ ವಿಶೇಷ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಮೂಡಂಬೈಲು ಶಾಲೆಯಲ್ಲಿ ನಡೆದ ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಜೋನ್ ಕ್ರಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ರಾಜ್ಯಾಧ್ಯಕ್ಷ ರವೀಂದ್ರನಾಥ ಕೆ.ಆರ್. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ.ಉಪಸ್ಥಿತರಿದ್ದು ಮಾಹಿತಿ-ಮಾರ್ಗದರ್ಶನ ನೀಡಿದರು.
ಮಾನವಹಕ್ಕು ಆಯೋಗ ಹೊರಡಿಸಿರುವ ಆದೇಶದ ವಿರುದ್ದ ಜಿಲ್ಲಾ ಶಿಕ್ಷಣ ಉಪನಿರ್ದೇಶಕರು ಸಹಿತ ಸಂಬಂಧಪಟ್ಟವರ ಮೂಲಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿ ಪರಿಶೀಲಿಸಲು ತೀರ್ಮಾನಿಸಲಾಯಿತು. ಯಾವ ಕಾರಣಕ್ಕೂ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಬೋಧನೆಗೆ ಕನ್ನಡ ಬಾರದ ಇತರ ಭಾಷೆಗಳ ಶಿಕ್ಷಕರನ್ನು ನೇಮಿಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಭೆ ನಿರ್ಣಯ ಕೈಗೊಂಡಿತು. ಶಾಲಾ ರಕ್ಷಕ ಶಿಕ್ಷಕ ಸಂಘ, ಮಾತೃಸಮಿತಿ ಹಾಗೂ ಶಿಕ್ಷಕ ವೃಂದದ ನೇತೃತ್ವದಲ್ಲಿ ಸಂಬಂಧಪಟ್ಟವರಿಗೆ ಈ ಬಗ್ಗೆ ಮನವಿ ನೀಡಲು ತೀರ್ಮಾನಿಸಲಾಗಿದೆ. ಕನ್ನಡ ಹೋರಾಟ ಸಮಿತಿ ಈ ನಿಟ್ಟಿನಲ್ಲಿ ಸಂಪೂರ್ಣ ಬೆಂಬಲ ಸೂಚಿಸಿದೆ.
ಶಾಲಾ ಮಾತೃಸಮಿತಿ ಅಧ್ಯಕ್ಷೆ ಅನುಪಮ, ಮಕ್ಕಳ ಹೆತ್ತರಾದ ಭಿಪಾತಿಮ್ಮ, ಯಶೋಧ, ಸಬೀನ, ಪ್ರತಿಭಾ ಎಂ., ಲತೀಫ್, ಶಿಕ್ಷಕಿ ದಯಾವತಿ ಸಾಲ್ಯಾನ್ ಉಪಸ್ಥಿತರಿದ್ದು ಮಾತನಾಡಿದರು. ಶಿಕ್ಷಕ ಸುಕೇಶ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು.