ನವದೆಹಲಿ: ವೈದ್ಯಕೀಯ ಶಿಕ್ಷಣ ಕ್ಷೇತ್ರದ ಚಾರಿತ್ರಿಕ ಸುಧಾರಣೆಯಲ್ಲಿ ಉನ್ನತ ಶಿಕ್ಷಣ ನಿಯಂತ್ರಕರಾಗಿ ಕಾರ್ಯನಿರ್ವಹಿಸಲು ನಾಲ್ಕು ಸ್ವಾಯತ್ತ ಮಂಡಳಿಗಳೊಂದಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವನ್ನು ರಚಿಸಲಾಗಿದೆ. ಈ ಮಧ್ಯೆ ಭಾರತೀಯ ವೈದ್ಯಕೀಯ ಮಂಡಳಿಯನ್ನು ರದ್ದುಗೊಳಿಸಲಾಗಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ದಿನನಿತ್ಯದ ಕಾರ್ಯಗಳಿಗೆ ನೆರವು ನೀಡುವಂತೆ ಪದವಿಪೂರ್ವ ವೈದ್ಯಕೀಯ ಶಿಕ್ಷಣ ಮಂಡಳಿ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿ, ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿ, ಮತ್ತು ನೈತಿಕತೆ ಮತ್ತು ವೈದ್ಯಕೀಯ ನೋಂದಣಿ ಮಂಡಳಿಯ ನಾಲ್ಕು ಸ್ವಾಯತ್ತ ಮಂಡಳಿಗಳನ್ನು ರಚಿಸಲಾಗಿದೆ.
ವೃತ್ತಿಪರತೆ, ಅನುಭವ ಮತ್ತು ಬದ್ಧತೆ ಹೊಂದಿರುವ ಪುರುಷ ಮತ್ತು ಮಹಿಳೆಯರು ಈಗ ವೈದ್ಯಕೀಯ ಶಿಕ್ಷಣದಲ್ಲಿ ಮತ್ತಷ್ಟು ಸುಧಾರಣೆ ತರುವ ಜಾಗದಲ್ಲಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ 24 ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ನವದೆಹಲಿಯ ಏಮ್ಸ್ ನ ಇಎನ್ ಟಿ ವಿಭಾಗದ ನಿವೃತ್ತ ಪ್ರೊಫೆಸರ್ ಡಾ. ಎಸ್ ಸಿ ಶರ್ಮಾ ಮೂರು ವರ್ಷಗಳ ಅವಧಿಗೆ ಮುಖ್ಯಸ್ಥರಾಗಿ ಆಯ್ಕೆಗೊಂಡಿದ್ದಾರೆ.ಇವರಲ್ಲದೇ, ನಾಲ್ಕು ಸ್ವಾಯತ್ತ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಚಂಡೀಘಡದ ಪಿಜಿಐಎಂಇಆರ್ ನಿರ್ದೇಶಕ ಡಾ. ಜಗತ್ ರಾಮ್, ಟಾಟಾ ಸ್ಮಾರಕ ಆಸ್ಪತ್ರೆಯ ಡಾ. ರಾಜೇಂದ್ರ ಎ ಬಾಡ್ವೆ, ಗೋರಖ್ ಪುರ ಏಮ್ಸ್ ನ ಕಾರ್ಯಕಾರಿ ನಿರ್ದೇಶಕ ಡಾ. ಸುರೇಖಾ ಕಿಶೋರ್ ಮತ್ತಿತರ 10 ಮಂದಿ ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಎಕ್ಸ್ - ಆಫಿಸಿಯೋ ಸದಸ್ಯರಾಗಿದ್ದಾರೆ.
ಇದಲ್ಲದೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಂದ 10 ನಾಮನಿರ್ದೇಶಿತರು, ರಾಜ್ಯ ವೈದ್ಯಕೀಯ ಮಂಡಳಿಗಳಿಂದ ಒಂಬತ್ತು ಮಂದಿ ನಾಮನಿರ್ದೇಶಿತರು ಮತ್ತು ವೈವಿಧ್ಯಮಯ ವೃತ್ತಿಗಳಿಂದ ಮೂವರು ತಜ್ಞ ಸದಸ್ಯರನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೊಂದಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.