ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಇಲಿಜ್ವರ ಹರಡುತ್ತಿದ್ದು, ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಲಕ್ಷಣಗಳು ಮತ್ತು ಹರಡುವಿಕೆ:
ನಿತ್ರಾಣ ಸಹಿತ ಜ್ವರ, ತಲೆನೋವು, ಮಾಂಸಪೇಷಿಗಳಲ್ಲಿ ನೋವು ಇತ್ಯಾದಿ ಇಲಿಜ್ವರದ ಲಕ್ಷಣಗಳಾಗಿವೆ. ಕಣ್ಣುಗಳು ಕೆಂಪಾಗುವುದು, ಮೂತ್ರದ ಪ್ರಮಾಣದಲ್ಲಿ ಕಡಿತ, ಹಳದಿ ಜ್ವರದ ಲಕ್ಷಣಗಳು ತಲೆದೋರಬಹುದು. ಇಲಿ, ನಾಯಿ, ಬೆಕ್ಕು, ಇತರ ಜಾನುವಾರುಗಳ ಮೂತ್ರದ ಮೂಲಕ ಇಲಿಜ್ವರ ಹರಡುತ6ತದೆ. ಈ ಮೂತ್ರ ಮಣ್ಣಲ್ಲಿ, ನೀರಲ್ಲಿ ಬೆರೆತು, ಅಲ್ಲಿಉಂದ ರೋಗಾಣುಗಳು ಮಾನವದೇಹದ ಗಾಯಗಳ ಮೂಲಕ ಒಳಪ್ರವೇಶಿಸುತ್ತವೆ. ಗದ್ದೆಗಳಲ್ಲಿ, ಚರಂಡಿ, ತೊರೆ, ಕಾಲುವೆ, ಕೆರೆ, ನೀರು ಕಟ್ಟಿನಿಲ್ಲುವ ತಾಣಗಳಲ್ಲಿಳಿಯುವವರಿಗೆ ಅಧಿಕ ಪ್ರಮಾಣದಲ್ಲಿ ಈ ರೋಗ ತಗುಲುತ್ತದೆ.
ಪ್ರತಿರೋಧ:
ಪ್ರಾಣಿ ಸಾಕಣೆ ನಡೆಸುವವರು ಕೈ-ಕಾಲುಗಳಿಗೆ ಭದ್ರವಾದ ರಬ್ಬರ್ ನಿರ್ಮಿತ ಕವಚ-ಬೂಟು ಧರಿಸಬೇಕು. ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಜಾನುವಾರುಗಳ ಮಲಮೂತ್ರ ಇತರ ನೀರಿಗೆ ಬೆರೆಯದಂತೆ ನೋಡಿಕೊಳ್ಳಬೇಕು. ಆಹಾರ, ಕುಟಿಯುವ ನೀರು ಇತ್ಯಾದಿಗಳಿಗೆ ಇಲಿ ಸ್ಪರ್ಶ, ಇಲಿಯ ವಿಸರ್ಜನೆ ಸೇರ್ಪಡೆಯಾಗದಂತೆ ಭದ್ರವಾಗಿ ಮುಚ್ಚಿಡಬೇಕು. ನೀರು ಕಟ್ಟಿ ನಿಂತಲ್ಲಿ ಮಕ್ಕಳು, ಇತರರು ಅನಾವಶ್ಯಕವಾಗಿ ಇಳಿಯಕೂಡದು.(ವಿಶೇಷವಾಗಿ ಮೈಯಲ್ಲಿ ಗಾಯಗಳಿರುವವರು.)ಆಹಾರವನ್ನು ನಿರ್ಲಕ್ಷ್ಯದಿಂದ ಚೆಲ್ಲಕೂಡದು. ಇದು ಇಲಿಗಳನ್ನು ಆಕರ್ಷಿಸುತ್ತದೆ ಎಂದವರು ತಿಳಿಸಿರುವರು.