ಕುಂಬಳೆ: ತುಳುವೆರೆ ಆಯನೊ ಕೂಟ ಬದಿಯಡ್ಕದ ನೇತೃತ್ವದಲ್ಲಿ ಭಾನುವಾರ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರ ಪರಿಸರದಲ್ಲಿ ಸೋಣೆದ ಸುಗಿಪು ಕಾರ್ಯಕ್ರಮ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ನಡೆಯಿತು.
ತುಳುವೆರೆ ಆಯನೊ ಕೂಟದ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿ.ಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಬಾಲ ಪ್ರತಿಭೆ, ಕಲರ್ಸ್ ಚಾನೆಲ್ ಕನ್ನಡ ಕೋಗಿಲೆ ಖ್ಯಾತಿಯ, ತುಳುನಾಡ ಸಿರಿ ಪ್ರಶಸ್ತಿ ವಿಜೇತೆ ಅಪೇಕ್ಷಾ ಪೈ ದೀಪ ಬೆಳಗಿಸಿ ಉದ್ಘಾಟಿಸಿದಳು. ಈ ಸಂದರ್ಭ ಮಾತನಾಡಿದ ಅಪೇಕ್ಷಾ ಪೈ, ನಮ್ಮ ತುಳುನಾಡಿನ ಆಚಾರ-ವಿಚಾರಗಳ ಬಗ್ಗೆ ನಮ್ಮಂತಹ ಎಳೆಯ ಹರೆಯದವರಿಗೆ ತಿಳಿಸಿಕೊಡುವಲ್ಲಿ, ನೆಲದ ಶ್ರೀಮಂತಿಕೆಯ ಬಗ್ಗೆ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು ಎಂದು ತಿಳಿಸಿದಳು.
ಇನ್ನೋರ್ವೆ ಬಾಲ ಪ್ರತಿಭೆ, ಯುವ ಕವಯಿತ್ರಿ ಸೃಷ್ಟಿ ಶೆಟ್ಟಿ ಕಾಟುಕುಕ್ಕೆ ಸೋಣ ಆಚರಣೆಯ ವರ್ತಮಾನದ ಅಗತ್ಯತೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ತುಳುನಾಡಿನ ಪ್ರತಿಯೊಂದು ಆಚಾರಗಳ ಹಿಂದಿನ ತಾತ್ವಿಕತೆ ಎಂದಿಗೂ ವೈಜ್ಞಾನಿಕ ಹಿನ್ನೆಲೆಯಿಂದ ಕೂಡಿದ್ದು ಪ್ರಕೃತಿ-ಜೀವ ಸಂಬಂಧಗಳ ಶೃಂಖಲೆಯೊಂದಿಗೆ ಬೆಸೆದುಕೊಂಡಿದೆ ಎಮದಳು.
ಯುವ ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು, ತುಳುವೆರೆ ಆಯನೊ ಸಮಿತಿಯ ನಿಕಟಪೂರ್ವ ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ, ಖ್ಯಾತ ಯಕ್ಷಗಾನ ಕಲಾವಿದ ರಾಧಾಕೃಷ್ಣ ನಾವಡ ಮಧೂರು, ಶ್ರೀದೇವಿ ಭಜನಾ ಮಂದಿರದ ಕಾರ್ಯದರ್ಶಿ ನಾಗೇಶ್ ಆಚಾರ್ಯ, ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯಂತ ಪಾಟಾಳಿ, ರಾಜೇಶ್ ಆಳ್ವ ಬದಿಯಡ್ಕ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಉಪಸ್ಥಿತರಿದ್ದು ಶುಭಹಾರೈಸಿದರು.
ಈ ಸಂದರ್ಭ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರ ತಂಡದವರಿಂದ ಭಕ್ತಿ ಸಂಕೀರ್ತನೆ, ಅಕ್ಷತಾ ನಾಯ್ಕಾಪು ಮತ್ತು ಬಳಗದವರಿಂದ ನೃತ್ಯ, ಗಾಯನ ಹಾಗೂ ಕಿರು ಪ್ರಹಸನ ಪ್ರದರ್ಶನಗೊಂಡಿತು. ಜೊತೆಗೆ ವಿಶೇಷ ಆಕರ್ಷಣೆಯಾಗಿ ಐತ್ತಪ್ಪ ಕಣ್ಣೂರು ಜೋಡಲ ತಂಡದವರಿಂದ ಜೋಗಿ ಕುಣಿತದ ಪ್ರದರ್ಶನ ನಡೆಯಿತು. ಅರುಣ್ ದಾಸ್ ಜೋಗಿ ವೇಶಧಾರಿಯಾಗಿ ಸಹಕರಿಸಿದರು.
ವಾಂತಿಚ್ಚಾಲ್ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿ, ರವಿ.ನಾಯ್ಕಾಪು ವಂದಿಸಿದರು. ತುಳುವೆರೆ ಆಯನೊ ಸಮಿತಿಯ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು.