ತಿರುವನಂತಪುರ: ಜಿಲ್ಲೆಯನ್ನು ನಡುಗಿಸಿರುವ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟು ಸಿ.ಬಿ.ಐ ನ ಅಭಿಪ್ರಾಯ ಕೇಳಿದೆ. ಕಾಸರಗೋಡು ಪೆರಿಯ ನಿವಾಸಿ ಶರತ್‍ಲಾಲ್ ಹಾಗೂ ಕೃಪೇಶ್ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಈ ಅಭಿಪ್ರಾಯ ಕೇಳಲಾಗಿದೆ. ಅವಳಿ ಕೊಲೆ ಪ್ರಕಕರಣವನ್ನು ಸಿಬಿಐಗೆ ವಹಿಸಿಕೊಟ್ಟಿರುವ ಹೈಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ನೀಡಲೂ ಸುಪ್ರೀಂ ಕೋರ್ಟು ನಿರಾಕರಿಸಿದೆ. ಈ ಮೂಲಕ ಕೇರಳ ಸರ್ಕಾರಕ್ಕೆ ಮುಖಭಂಗವಾಗಿದೆ. ಕೃಪೇಶ್ ಮತ್ತು ಶರತ್‍ಲಾಲ್ ಅವರ ತಂದೆ, ತಾಯಂದಿರಿಗೆ ನಾಲ್ಕು ವಾರಗಳ ಒಳಗಾಗಿ ಉತ್ತರಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ಅವಳಿ ಕೊಲೆ ಪ್ರಕರಣವನ್ನು ಸಿ.ಬಿ.ಐಗೆ ವಹಿಸಿಕೊಟ್ಟ ಹೈಕೋರ್ಟು ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿತ್ತು.
ಶರತ್ ಲಾಲ್, ಕೃಪೇಶ್ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವಂತೆ ಕೊಲೆಯಾದ ಯುವಕರಿಬ್ಬರ ತಂದೆ ಮತ್ತು ತಾಯಂದಿರು ಹೈಕೋರ್ಟಿಗೆ ಸಲ್ಲಿಸಿದ್ದ ಮನವಿಗೆ ಏಕಸದಸ್ಯ ಪೀಠ ಅಂಗೀಕಾರ ನೀಡಿದ್ದು, ತೀರ್ಪನ್ನು ವಿಭಾಗೀಯ ಪೀಠವೂ ಎತ್ತಿ ಹಿಡಿದಿತ್ತು. 2019 ಫೆಬ್ರವರಿ 17ರಂದು ಕಾಸರಗೋಡು ಪೆರಿಯ ಕಲ್ಯೋಟ್‍ನ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್(24)ಹಾಗೂ ಕೃಪೇಶ್(21) ಅವರನ್ನು ತಂಡವೊಂದು ಬರ್ಬರವಾಗಿ ಹತ್ಯೆಗೈದಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಏರಿಯಾ, ಸ್ಥಳೀಯ ಕಾರ್ಯದರ್ಶಿಗಳು, ಕಾರ್ಯಕರ್ತರು ಒಳಗೊಂಡಂತೆ 14ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಸದಸ್ಯ ಎ.ಪೀತಾಂಬರನ್ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ.