ಕಾಸರಗೋಡು: ಕೇರಳ ಲೋಕಸೇವಾ ಆಯೋಗವು ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮಾತೃಭಾಷಾ ಅರಿವು ಬೇಕಾಗಿಲ್ಲ ಎಂಬ ತನ್ನ ನಿಲುವನ್ನು ಕೈಬಿಡಬೇಕು ಎಂದು ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು.)ನ ಪ್ರಾಂತ್ಯ ಅಧ್ಯಕ್ಷ ಪಿ.ಗೋಪಕುಮಾರ್ ಒತ್ತಾಯಿಸಿದ್ದಾರೆ.
ಆಯೋಗವು ಮುಂದಿನ ನವೆಂಬರ್ ತಿಂಗಳಲ್ಲಿ ನಡೆಸಲಿರುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳು, ಸಮಾಜ ವಿಜ್ಞಾನ, ಕೇರಳದ ನವೋತ್ಥಾನ, ಸಾಮಾನ್ಯ ವಿಜ್ಞಾನ, ಗಣಿತ, ಶೈಕ್ಷಣಿಕ ಮನೋವಿಜ್ಞಾನ ಎಂಬೀ ವಿಷಯಗಳಲ್ಲಿ ಪ್ರಶ್ನೆ ತಯಾರಿಸುವ ನಿಲುವು ಪ್ರಕಟಿಸಿದೆ.
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಈ ವಿಷಯಗಳ ಹೊರತಾಗಿ ಇಂಗ್ಲಿಷ್ ಭಾಷಾ ಅರಿವಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸೇರ್ಪಡೆಗೊಳಿಸುವುದಾಗಿ ಹೇಳಲಾಗಿದೆ. ಈ ಎರಡು ಪರೀಕ್ಷೆಗಳಲ್ಲಿಯೂ ಮಾತೃಭಾಷೆಯನ್ನು ಕಡೆಗಣಿಸಲಾಗಿದೆ. ಪ್ರಾಥಮಿಕ ಶಿಕ್ಷಣದ ಮಾಧ್ಯಮವು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆ ಆಗಿರಬೇಕೆಂದು ಪ್ರತಿಪಾದಿಸುವ ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರವು ಅಂಗೀಕರಿಸಿರುವ ಸಂದರ್ಭದಲ್ಲಿ ಮಾತೃಭಾಷೆಯನ್ನು ಹೊಸ್ತಿಲಿನಿಂದ ಹೊರಗಟ್ಟುವ ಪಿ.ಎಸ್. ಸಿ.ಯ ಧೋರಣೆಯು ಸಮರ್ಥನೀಯವಲ್ಲ. ಈ ಹಿಂದೆ ಪಿ.ಎಸ್. ಸಿ.ಪರೀಕ್ಷೆಯಲ್ಲಿ ಇಪ್ಪತ್ತು ಶೇಕಡಾದಷ್ಟು ಭಾಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸೇರ್ಪಡೆಗೊಳಿಸಲಾಗುತ್ತಿತ್ತು.
ಕೇರಳವನ್ನು ಸರದಿಯಲ್ಲಿ ಆಡಳಿತ ನಡೆಸುವ ಎಡ-ಬಲ ಸರ್ಕಾರಗಳು ಆಯೋಗದ ಈ ನಿಲುವನ್ನು ಸರಿಪಡಿಸದೆ ಮಾತೃಭಾಷೆಯ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿವೆ ಎಂದು ಪಿ.ಗೋಪಕುಮಾರ್ ಆರೋಪಿಸಿದ್ದಾರೆ.
ಕೇರಳದ ಶಿಕ್ಷಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಬಗ್ಗೆ ಮಾತನಾಡುವ ಸರ್ಕಾಕಾರವು ತನ್ನ ಮಾತೃಭಾಷೆಯನ್ನು ಕೂಡ ಸರಿಯಾಗಿ ಕಲಿಯಲಾಗದ ಯುವ ತಲೆಮಾರನ್ನು ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ. ಇತರ ಪ್ರಾಂತ್ಯಗಳಿಂದ ಅಖಿಲ ಭಾರತ ಮಟ್ಟದಲ್ಲಿ ಆಯ್ಕೆಗೊಂಡು ಕೇರಳದಲ್ಲಿ ನೇಮಕಾತಿ ಪಡೆದವರಿಗೆ ಕೂಡ ಪ್ರಾದೇಶಿಕ ಭಾಷಾಜ್ಞಾನವು ಆಪೇಕ್ಷಣೀಯವೆಂದಿದೆ. ಸರ್ಕಾರವು ಈ ವಿಷಯದಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗೋಪಕುಮಾರ್ ಒತ್ತಾಯಿಸಿದ್ದಾರೆ.