ನವದೆಹಲಿ: ಪೂರ್ವ ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ನಡುವೆ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಶೀಘ್ರದಲ್ಲಿಯೇ ಪರಿಹಾರ ದೊರಕುವ ಸಾಧ್ಯತೆಗಳು ಕಂಡು ಬರುತ್ತಿವೆ.
ಸೆಪ್ಟೆಂಬರ್ 9-10 ರಂದು ಮಾಸ್ಕೋದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ) ಸಭೆಯಲ್ಲಿ ವಿದೇಶಾಂಗ ಸಚಿವ ಎಂ. ಜೈಶಂಕರ್ ಭಾಗವಹಿಸಲಿದ್ದಾರೆಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಸಭೆ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಉಭಯ ರಾಷ್ಟ್ರಗಳ ಗಡಿ ಸಮಸ್ಯೆ ಕುರಿತು ಮಾತುಕತೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮಾತುಕತೆ ನಡೆಸುವುದು ಖಚಿತಗೊಂಡಿರುವ ಹಿನ್ನೆಲೆಯಲ್ಲಿ ಮಾತುಕತೆ ವೇಳೆ ವಿವಾದಿತ ಪ್ರದೇಶಗಳಿಂದ ಸೇನಾ ಹಿಂತೆಗೆತ ಕುರಿತುನಿರ್ಧಾರ ಕೈಗೊಳ್ಳುವ ನಿರೀಕ್ಷೆಗಳು ಇದೀಗ ಗರಿಗೆದರಿದೆ.
ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಚೀನಾದ ರಕ್ಷಣಾ ಸಚಿವ ವೆ.ಫೆಂಗೆ ಅವರ ನಡುವೆ ಕಳೆದ ಶುಕ್ರವಾರ ಮುಖಾಮುಖಿ ಮಾತುಕತೆ ನಡೆದಿತ್ತಾದರೂ, ಬಿಕ್ಕಟ್ಟಿಗೆ ಮಂಗಳವಾಡುವಂತಹ ಫಲಪ್ರದ ಬೆಳವಣಿಗೆ ನಡೆದಿರಲಿಲ್ಲ.
ಗಡಿಯಲ್ಲಿ ಕಳೆದ ಮೇ ತಿಂಗಳಿನಿಂದ ಸಂಘರ್ಷ ನಡೆಯುತ್ತಲೇ ಇದೆ. ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಉಭಯ ದೇಶಗಳ ಯೋಧರು ಘರ್ಷಣೆಗೆ ಬಲಿಯಾಗಿದ್ದಾರೆ. ಹಲವು ಸುತ್ತಿನ ಮಾತುಕತೆ ನಡೆದರೂ ಬಿಕ್ಕಟ್ಟು ಇತ್ಯರ್ಥವಾಗಿಲ್ಲ. ಈ ನಡುವೆ, ಆ29-30ರಂದು ಚೀನಾ ಪಡೆಗಳು ಮತ್ತೆ ಭಾರತದತ್ತ ನುಗ್ಗಲು ಯತ್ನಿಸಿದಾಗ ಭಾರತೀಯ ಸೇನೆ ಹಿಮ್ಮೆಟ್ಟಿಸಿದ ಬೆಳವಣಿಗೆ ಬಳಿಕೆ ಗಡಿಯಲ್ಲಿ ಯುದ್ಧ ಸದೃಶ ವಾತಾವರಣ ನಿರ್ಮಾಣವಾಗಿದೆ.
ಈ ನಡುವೆ ಲಡಾಖ್ ಸಂಘರ್ಷ ಹಾಗೂ ದಕ್ಷಇಣ ಚೀನಾ ಸಮುದ್ರ ವಿಚಾರವನ್ನು ಇಟ್ಟುಕೊಂಡು ಚೀನಾದಲ್ಲಿ ರಾಷ್ಟ್ರೀಯ ಭಾವ ಉದ್ದೀಪನಗೊಳಿಸಲು ಕಮ್ಯುನಿಸ್ಟ್ ಪಕ್ಷದ ಸರ್ಕಾರ ಪ್ರಯತ್ನಿಸಿತ್ತು. ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಚೀನಾ ನಿಲುವು ಬದಲಾಗಿದೆ ಎಂದೂ ಹೇಳಲಾಗುತ್ತಿದೆ.