HEALTH TIPS

ಭಾರತದ ಸಾರ್ವಭೌಮತ್ವ ಮೇಲೆ ಹಕ್ಕು ಹೊಂದಲು ನೋಡುವವರಿಗೆ 'ರಫೇಲ್'ಸೇರ್ಪಡೆ ಕಠಿಣ ಸಂದೇಶ ರವಾನಿಸಿದೆ:ರಾಜನಾಥ್ ಸಿಂಗ್

       ಅಂಬಾಲಾ(ಹರ್ಯಾಣ): ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಡುತ್ತಿರುವವರಿಗೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆ ಅತಿದೊಡ್ಡ ಕಠಿಣ ಸಂದೇಶ ರವಾನಿಸಿದೆ. ನಮ್ಮ ದೇಶದ ಗಡಿಭಾಗದಲ್ಲಿ ಸದ್ಯ ಇರುವ ಪರಿಸ್ಥಿತಿಗೆ ಅಥವಾ ನಮ್ಮ ನೆರೆಯ ದೇಶಗಳು ಉಂಟುಮಾಡಿರುವ ಪರಿಸ್ಥಿತಿ ಪರಿಗಣಿಸಿದರೆ ರಫೇಲ್ ಯುದ್ಧ ವಿಮಾನ ಸೇರ್ಪಡೆ ಅತ್ಯಂತ ಮುಖ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

        ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಇಂದು ವಿದ್ಯುಕ್ತವಾಗಿ ಫ್ರಾನ್ಸ್ ನಿಂದ ಖರೀದಿಸಲಾದ ರಫೇಲ್ ಯುದ್ಧ ವಿಮಾನವನ್ನು ಸೇರ್ಪಡೆಗೊಳಿಸುವ ಕಾರ್ಯಕ್ರಮ ನೆರವೇರಿತು. ಸರ್ವಧರ್ಮ ಪೂಜೆಯ ಮೂಲಕ ಯುದ್ಧ ವಿಮಾನವನ್ನು ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ರಕ್ಷಣಾ ಸಚಿವರು, ಇತ್ತೀಚೆಗೆ ನಾನು ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ದೃಷ್ಟಿಕೋನ, ನಿಲುವನ್ನು ಜಗತ್ತಿನ ಮುಂದೆ ಸಾರಿದ್ದೇನೆ. ಭಾರತ ದೇಶದ ಸ್ವಾಯತ್ತತೆ, ಪ್ರಾಂತೀಯ ಐಕ್ಯತೆ, ಸಾರ್ವಭೌಮತ್ಯದ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಮ್ಮ ಬದ್ಧತೆ, ತೀರ್ಮಾನದ ಬಗ್ಗೆ ಕೂಡ ಸ್ಪಷ್ಟ ಸಂದೇಶ ರವಾನಿಸಿದ್ದೇನೆ. ಎಂದರು.

      ಕಾಲ ಬದಲಾದಾಗ ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು, ನಮ್ಮನ್ನು ನಾವು ಸಂಪೂರ್ಣವಾಗಿ ಸನ್ನದ್ದು ಮಾಡಿಕೊಳ್ಳಬೇಕು ಎಂಬುದನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ. ರಫೇಲ್ ಯುದ್ಧ ವಿಮಾನ ಸೇರ್ಪಡೆಯಿಂದ ಭಾರತೀಯ ವಾಯುಪಡೆಯ ಸಾಮರ್ಥ್ಯ, ತಾಂತ್ರಿಕವಾಗಿ ಕ್ರಾಂತಿಕಾರಿಯಾಗಿ ಬದಲಾಗಲಿಗೆ. ಭಾರತ-ಫ್ರಾನ್ಸ್ ಸಂಬಂಧಕ್ಕೆ ಹೊಸ ದಿಕ್ಕು ನೀಡಲಿದೆ ಎಂದರು.

      ಭಾರತದ ಇತಿಹಾಸದಲ್ಲಿ ಇಂದು ಮತ್ತೊಂದು ಮೈಲಿಗಲ್ಲು ದಿನವಾಗಿದೆ. ಈ ಸಂದರ್ಭವನ್ನು ನಾವು ಹೆಮ್ಮೆಯಿಂದ ನೋಡುತ್ತಿದ್ದೇವೆ. ನಮಗೆ ಹೆಮ್ಮೆಯ ವಿಷಯ. ಈ ಸಂದರ್ಭದಲ್ಲಿ ದೇಶವಾಸಿಗಳಿಗೆ ಮತ್ತು ಭಾರತದ ವಾಯುಪಡೆಯ ಸಿಬ್ಬಂದಿಗೆ ನಾನು ಅಭಿನಂದನೆ ಹೇಳುತ್ತೇನೆ. ಭಾರತ ಮತ್ತು ಫ್ರಾನ್ಸ್ ಆರ್ಥಿಕ, ಸಾಂಸ್ಕೃತಿಕ, ಕಾರ್ಯತಂತ್ರ ಸಹಭಾಗಿತ್ವವನ್ನು ಹಲವು ವರ್ಷಗಳಿಂದ ಹೊಂದಿದೆ. ಗಟ್ಟಿಯಾದ ಪ್ರಜಾಪ್ರಭುತ್ವ ಮತ್ತು ವಿಶ್ವದ ಶಾಂತಿಗೆ ಬಯಸುವುದರಿಂದ ನಮ್ಮ ಸಂಬಂಧ ಬೆಳೆದುಕೊಂಡು ಹೋಗಿದೆ ಎಂದರು.

     ಇತ್ತೀಚೆಗೆ ಗಡಿಯಲ್ಲಿ ನಡೆಯುತ್ತಿರುವ ದುರದೃಷ್ಟಕರ ಘಟನೆ ಸಂದರ್ಭದಲ್ಲಿ ಭಾರತೀಯ ವಾಯುಪಡೆ ಗಡಿ ವಾಸ್ತವ ರೇಖೆ ಬಳಿ ತೆಗೆದುಕೊಂಡ ನಿರ್ಧಾರ ಬದ್ಧತೆಯನ್ನು ಮೆರೆದಿದೆ. ಈ ಸಂದರ್ಭದಲ್ಲಿ ವಾಯುಪಡೆ ಸಿಬ್ಬಂದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವಾಯುಪಡೆ ತನ್ನ ಸಾಧನಗಳನ್ನು ಫಾರ್ವರ್ಡ್ ಬೇಸ್‌ಗಳಲ್ಲಿ ನಿಯೋಜಿಸಿದ ವೇಗವು ನಮ್ಮ ವಾಯುಪಡೆಯು ತನ್ನ ಕಾರ್ಯಾಚರಣೆಯ ಜವಾಬ್ದಾರಿಗಳನ್ನು ಪೂರೈಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂಬ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಶ್ಲಾಘಿಸಿದರು.

        ಭಾರತ-ಫ್ರಾನ್ಸ್ ಸಂಬಂಧ: 1965ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಮತ್ತು 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಫ್ರಾನ್ಸ್ ನ ಯುದ್ಧ ವಿಮಾನವನ್ನು ಬಳಸಿಕೊಂಡಿದ್ದನ್ನು ರಾಜನಾಥ್ ಸಿಂಗ್ ಸ್ಮರಿಸಿದರು.

     ಪ್ರಾದೇಶಿಕ ಭದ್ರತೆ ವಿಚಾರದಲ್ಲಿ ಭಾರತ ಮತ್ತು ಫ್ರಾನ್ಸ್ ಸಮಾನ ಮನಸ್ಥಿತಿಯನ್ನು ಹೊಂದಿದ್ದು, ಹಲವು ಸವಾಲುಗಳನ್ನು ಪರಸ್ಪರ ಸಹಕಾರದ ಮೂಲಕ ಎರಡೂ ದೇಶಗಳು ಎದುರಿಸುತ್ತವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕೂಡ ಭಾರತ, ಫ್ರಾನ್ಸ್ ಸಮಾನ ಮನಸ್ಥಿತಿಯನ್ನು ಹೊಂದಿದೆ. ಮಜಗಾಂವ್ ಹಡಗುಕಟ್ಟೆಗಳಲ್ಲಿ ಆರು ಸ್ಕಾರ್ಪೀನ್-ವರ್ಗ ಜಲಾಂತರ್ಗಾಮಿಗಳು, ತಂತ್ರಜ್ಞಾನ ವರ್ಗಾವಣೆಯಡಿಯಲ್ಲಿ ಸಹಭಾಗಿತ್ವವನ್ನು ಹೊಂದಿದ್ದೇವೆ ಎಂದರು.

     ಭಾರತದಲ್ಲಿ ಹೂಡಿಕೆಗೆ ಆಹ್ವಾನ: ಇದೇ ಸಂದರ್ಭದಲ್ಲಿ ರಾಜನಾಥ್ ಸಿಂಗ್, ಫ್ರಾನ್ಸ್ ನ ರಕ್ಷಣಾ ಕೈಗಾರಿಕೆಗಳು ಭಾರತದ ರಕ್ಷಣಾ ವಲಯದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು. ಸಹಭಾಗಿತ್ವ-ಕಾರ್ಯತಂತ್ರ ಮಾದರಿಯಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ, ಸ್ವಯಂಚಾಲಿತ ಮಾರ್ಗಗಳ ಮೂಲಕ, ಶೇಕಡಾ 74ರಷ್ಟು ವಿದೇಶಿ ನೇರ ಹೂಡಿಕೆ ಮೂಲಕ ಭಾರತದಲ್ಲಿ ಹೂಡಿಕೆ ಮಾಡುವಂತೆ ಫ್ರಾನ್ಸ್ ಕಂಪೆನಿಗಳಿಗೆ ಆಹ್ವಾನ ನೀಡಿದರು.

      ರಫೇಲ್ ಯುದ್ಧ ವಿಮಾನವನ್ನು ಜಲ ಫಿರಂಗಿ ಅಭಿನಂದನೆ ಮೂಲಕ ಸೇರ್ಪಡೆಗೊಳಿಸಲಾಯಿತು. ಫ್ರಾನ್ಸ್ ನ ರಕ್ಷಣಾ ಸಚಿವೆ ಫ್ಲಾರೆನ್ಸ್ ಪರ್ಲಿ ಕೂಡ ಇಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ, ರಕ್ಷಣಾ ಇಲಾಖೆ ಹಿರಿಯ ಅಧಿಕಾರಿಗಳು, ಸೇನಾಪಡೆ ಹಿರಿಯ ಅಧಿಕಾರಿಗಳು ಇಂದು ಭಾಗವಹಿಸಿದ್ದರು.

     ರಫೇಲ್ ಯುದ್ಧ ವಿಮಾನದ ಮೊದಲ 5 ವಿಮಾನಗಳು ಭಾರತದ ವಾಯುಪಡೆಯ 17 ಸ್ಕ್ವಾಡ್ರನ್ ನ ಗೋಲ್ಡನ್ ಆರ್ರೋದ ಭಾಗವಾಗಲಿದೆ. ಕಳೆದ ಜುಲೈ 27ರಂದು ಫ್ರಾನ್ಸ್ ನಿಂದ 5 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries