ಕಾಸರಗೋಡು: ಗಡಿನಾಡಿನ ಸಮಗ್ರ ಧಾರ್ಮಿಕ, ವೈದಿಕ, ರಾಜಕೀಯ, ಸಾಂಸ್ಕøತಿಕ, ಸಾಮಾಜಿಕ ವಿಚಾರಗಳಲ್ಲಿ ಎಂದಿಗೂ ಅಳಿಸಲಾರದ ನಂಟಿನೊಂದಿಗೆ ಬೃಂದಾವನಸ್ಥರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ ಕಣ್ಮರೆ ಎಡನೀರಿನಲ್ಲಿ ನೀರವ ಮೌನಕ್ಕೆ ಕಾರಣವಾಗಿದೆ.
ತಮ್ಮ ಪಟ್ಟದ ದೇವರಿಗೆ ಮೂರು ಹೊತ್ತು ಕಾಲ ಪೂಜೆ ಸಲ್ಲಿಸುತ್ತಾ ಆರಾಧನೆ , ಧ್ಯಾನದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಶ್ರೀಗಳು ತಮ್ಮ 60ನೇ ವರ್ಷದ ಚಾತುರ್ಮಾಸ್ಯವನ್ನೂ ಸೆ.2 ರಂದು ಅಭೂತಪೂರ್ವವಾಗಿ ಪೂರೈಸಿ ಎರಡು ದಿನಗಳಲ್ಲೇ ಬ್ರಹ್ಮೈಕ್ಯರಾದುದು ಅದೂ ಪಿತೃಪಕ್ಷದ ಪರ್ವ ಕಾಲದಲ್ಲಿ ವಿಶೇಷತೆಯಾಗಿಯೇ ಗುರುತಿಸಲ್ಪಡುತ್ತಿದೆ. ಸ್ವಾಮೀಜಿಗಳಿಲ್ಲದ ಮಠವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಆಣತಿಯಂತೆ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪೂಜಾ ದೀಕ್ಷೆಯನ್ನು ನೀಡಿರುವುದರಿಂದ ಮುಂದಕ್ಕೆ ಶ್ರೀ ಮಠದ ಆರಾಧನಾ ದೇವರಾದ ದಕ್ಷಿಣಾ ಮೂರ್ತಿ ಸಹಿತ ಶ್ರೀಗೋಪಾಲಕೃಷ್ಣ ದೇವರಿಗೆ ಪೂಜೆ ನಡೆಸಲಿದ್ದಾರೆ ಎಂಬುದಾಗಿ ಶ್ರೀಗಳ ಜತೆಗೇ ಕಳೆಯುತ್ತಿದ್ದ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ತಿಳಿಸುತ್ತಾರೆ.
ಇಂದು ಸಮಾಲೋಚನಾ ಸಭೆ:
ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಆರಾಧನಾ ಕಾರ್ಯಕ್ರಮ, ನೂತನ ಯತಿಗಳ ಪೀಠಾರೋಹಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲು ಇಂದು ಬೆಳಗ್ಗೆ 10.30ಕ್ಕೆ ಶ್ರೀಮಠದಲ್ಲಿ ಸಭೆ ನಡೆಯಲಿದೆ. ಸೆ. 16ರಿಂದ 18ರ ವರೆಗೆ ಶ್ರೀಗಳ ಆರಾಧನಾ ಕಾರ್ಯಕ್ರಮದ ಅಂಗವಾಗಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. 28ರಂದು ಶ್ರೀ ಮಠದ 14ನೇ ಯತಿವರ್ಯರಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪೀಠಾರೋಹಣ ನಡೆಯಲಿದೆ. ಈ ಬಗ್ಗೆ ಸಮಾಲೋಚನೆ ನಡೆಯಲಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.