ಕಾಸರಗೋಡು: ರಾಜ್ಯ ಸರಕಾರದ ಹಸಿವು ರಹಿತ ಕೇರಳ ಯೋಜನೆಯ ಅಂಗವಾಗಿ ಕಾಞಂಗಾಡನ್ನು ಹಸಿವು ರಹಿತ ನಗರವಾಗಿಸುವ ನಿಟ್ಟಿನಲ್ಲಿ ಚಟುವಟಿಕೆಗಳು ಆರಂಭಗೊಂಡಿವೆ.
ಇದರ ಅಂಗವಾಗಿ ಜನಪರ ಹೋಟೆಲ್ ಗಳನ್ನು ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸಿದರು. 20 ರೂ.ಗೆ ಭೋಜನ ನೀಡುವ ಯೋಜನೆ ಇದಾಗಿದೆ. ಕುಟುಂಬಶ್ರೀ ಕಾರ್ಯಕರ್ತರು ಈ ಯೋಜನೆಯನ್ನು ನಡೆಸುವರು. ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಬಳಿ ಮತ್ತು ಹಳೆ ಬಸ್ ನಿಲ್ದಾಣ ಬಳಿ ನಿರ್ಮಿಸಲಾದ ಜನಪರ ಹೋಟೆಲ್ ಗಳನ್ನು ಈ ವೇಳೆ ಉದ್ಘಾಟಿಸಲಾಯಿತು.
ಮಿನಿ ಸಿವಿಲ್ ಸ್ಟೇಷನ್ ಬಳಿಯ ಜನಪರ ಹೋಟೆಲ್ ನಲ್ಲಿ ಮೊದಲ ಭೋಜನವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸವಿದರು. ಉಪ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡ್ ನಗರಸಭೆ ಉಪಾಧ್ಯಕ್ಷೆ ಎನ್.ಸುಲೈಖಾ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಎಂ.ಪಿ.ಜಾಫರ್, ಎನ್.ಉಣ್ಣಿಕೃಷ್ಣನ್, ಟಿ.ವಿ.ಭಾರ್ಗವಿ ಮೊದಲಾದವರು ಉಪಸ್ಥಿತರಿದ್ದರು.