ಪೆರ್ಲ:ಕಜಂಪಾಡಿ ವಾರ್ಡಿನಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿ ಡಿಸಿಸಿ ಕಾರ್ಯದರ್ಶಿ ಸೋಮಶೇಖರ ಡಿ.ಎಸ್ ಅವರು ನೀಡಿರುವ ಹೇಳಿಕೆಗೆ ಸ್ಪಷ್ಟೀಕರಣವಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ರೂಪವಾಣಿ ಆರ್ ಭಟ್ ಪ್ರತ್ಯುತ್ತರ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಎರಡನೇ ಅವಧಿಗೆ ದೇಶವನ್ನಾಳುತ್ತಿರುವ ಬಿಜೆಪಿ ಪಕ್ಷ ಸೇರಿದವರನ್ನು ಸೆಗಣಿಯಲ್ಲಿ ಬೀಳುವವರು ಅಂತ ಹೇಳುವ ಕಾಂಗ್ರೆಸ್ಸಿಗರು ಇನ್ನೊಂದು ಸಲ ಆಲೋಚಿಸುವುದು ಒಳಿತು. ಇಡೀ ದೇಶವೇ ಬಿಜೆಪಿ ಮಯ ಆಗುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಧಿಕ್ಕರಿಸಿ ಮಾತನಾಡುತ್ತಿರುವ ಕಾಂಗ್ರೆಸ್ಸಿನ ನೇತಾರರ ಬಾಯಿಯಲ್ಲಿ ಹುಳ ಬಿದ್ದಿದೆ ಅಂತ ಹೇಳಬೇಕಷ್ಟೆ. ಕಜಂಪಾಡಿ ವಾರ್ಡಿನಲ್ಲಿ ಸತತ ಎರಡು ಅವಧಿಗೆ ಮತದಾರ ಬಾಂಧವರಿಂದ ತಿರಸ್ಕರಿಸಲ್ಪಟ್ಟ ಹತಾಶ ಮನಸ್ಥಿತಿಯವರು ದಿಕ್ಕು ತೋಚದೆ ಮಾತನಾಡುತ್ತಿದ್ದಾರೆ ಎಂದು ರೂಪವಾಣಿ ಆರ್ ಭಟ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ಕಜಂಪಾಡಿ ವಾರ್ಡಿನ ಕಾಂಗ್ರೆಸ್ಸಿನ ಮೂರು ಕುಟುಂಬಗಳು ಬಿಜೆಪಿ ಸೇರಿದ್ದು ಮಾಧ್ಯಮಗಳಲ್ಲೂ ಸಹ ಬಿತ್ತರವಾದ ವಿಚಾರ. ಎರಡು ದಿನಗಳ ಹಿಂದೆ ಕಜಂಪಾಡಿ ಕಾಲೋನಿಯಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ 30 ಜನ ಸೇರಿರುವುದು ಸಹ ಸತ್ಯವಾದ ವಿಚಾರ. ಅವರ ಸ್ವಂತ ಇಷ್ಟದ ಪ್ರಕಾರ ಅವರು ಪಕ್ಷಕ್ಕೆ ನಿಷ್ಠರಾಗಿ ಬಂದಿದ್ದು ಕಾಂಗ್ರೆಸ್ಸಿನವರ ನಿದ್ದೆಗೆಡಿಸಿ ಇರುವುದಂತೂ ಸತ್ಯ. ಮರುದಿನವೇ ಅಲ್ಲಿಗೆ ಓಡಿ ಹೋದ ಕಾಂಗ್ರೆಸ್ಸ್ ನೇತಾರರು ಬೇರೆ ವ್ಯಕ್ತಿಗಳನ್ನು ಅಲ್ಲಿ ನಿಲ್ಲಿಸಿ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದ್ದರೆ ಅದಕ್ಕೆ ನಾವ್ಯಾರು ಉತ್ತರ ಕೊಡುವ ಅಗತ್ಯವಿಲ್ಲ. ನಮ್ಮ ನೇತಾರರು ಈ ವಿಷಯವನ್ನು ಚೆನ್ನಾಗಿ ಅರಿತುಕೊಂಡು ಪಕ್ಷಕ್ಕೆ ನೇತೃತ್ವ ನೀಡುತ್ತಿದ್ದಾರೆ. ಕಾಂಗ್ರೆಸ್ಸಿನವರ ಯಾವುದೇ ಬೋಧನೆ ನಮ್ಮ ನೇತಾರರಿಗೆ ಅಗತ್ಯವಿಲ್ಲ. ಈ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಪರವಾಗಿ ಹೇಳಿಕೆ ನೀಡಿದ ನೇತಾರರು ಬಿಜೆಪಿ ಸೇರಲು ತಯಾರಾಗಿ ಬಂದದ್ದು ಯಾಕೆ ಅಂತ ಉತ್ತರಿಸಲಿ. ಕೇವಲ ಕಜಂಪಾಡಿ ವಾರ್ಡಿನಲ್ಲಿ ಮಾತ್ರವಲ್ಲ ಇಡೀ ಎಣ್ಮಕಜೆ ಗ್ರಾಮ ಪಂಚಾಯಿತಿನಲ್ಲಿ ಮತದಾರರಿಂದ ತಿರಸ್ಕಾರಕ್ಕೆ ಒಳಗಾಗುವ ಸೋಲಿನ ಭೀತಿ ಕಾಂಗ್ರೆಸ್ಸಿನ ವರಿಗೆ ಕಾಡುತ್ತಿದ್ದು, ಅದರ ಪರಿಣಾಮವಾಗಿ ಈ ರೀತಿಯ ಹೇಳಿಕೆಗಳು ಹೊರಬರುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.