ಬದಿಯಡ್ಕ: ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಇತಿಹಾಸವನ್ನು ವ್ಯವಸ್ಥಿತವಾಗಿ ತಿರುಚುವ ಪೂರ್ವಯೋಜಿತ ಕೃತ್ಯದ ವಿರುದ್ಧ ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ನೀರ್ಚಾಲಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು ಅಧ್ಯಕ್ಷತೆ ವಹಿಸಿದ್ದರು. ಮೊಗೇರರು ಇಲ್ಲಿನ ಮೂಲ ನಿವಾಸಿಗಳು ಮಾತ್ರವಲ್ಲದೆ ಭೂಮಿಪುತ್ರರು, ಮೇಲ್ವರ್ಗದಿಂದ ನಿರಂತರ ತುಳಿತವನ್ನು ಅನುಭವಿಸುತ್ತಾ ಬಂದವರು. ಜನಪದ ನಂಬಿಕೆಗಳಿರುವ ಕಥನಗಳು ಈ ನೆಲದ ಸತ್ಯ ವಿಚಾರವಾಗಿದೆ. ಇತಿಹಾಸದ ಪುಟಗಳಲ್ಲಿ ಮೊಗೇರ ಅರಸರನ್ನು ದುಷ್ಟರು, ಚಂಡಾಲರು, ದ್ರೋಹಿಗಳು, ಖದೀಮರು ಎಂದೆಲ್ಲ ಉಲ್ಲೇಖಿಸಲಾಗಿದೆ. ಅವರ ವ್ಯಕ್ತಿತ್ವವಕ್ಕೆ ಮಸಿ ಬಳಿದು ವಂಶವನ್ನು ನಾಶಗೊಳಿಸುವ ಪ್ರಯತ್ನ ಮಾಡಲಾಗಿದೆ. ಇದು ಸರ್ವತ್ರ ಖಂಡನೀಯ ಎಂದು ಅವರು ಹೇಳಿದರು.
ಕೆಲವು ಮಾಧ್ಯಮಗಳು ಸ್ಥಳ ಪುರಾಣಗಳಲ್ಲಿ ಮೊಗೇರರ ಅಸ್ತಿತ್ವ ಬಗ್ಗೆ ತಪ್ಪು ವದಂತಿಗಳು ಪ್ರಕಟವಾಗುತ್ತಿವೆ. ಸ್ಥಳ ಸಂದರ್ಶನ ನಡೆಸದೆ, ಸಂಪನ್ಮೂಲ ವ್ಯಕ್ತಿಗಳನ್ನು ಆಶ್ರಯಿಸದೆ ಲೇಖನಗಳನ್ನು ಬರೆಯಲಾಗುತ್ತದೆ. ಇದರಿಂದ ತಪ್ಪು ಮಾಹಿತಿಗಳು ಪ್ರಕಟವಾಗಲು ಸಾಧ್ಯ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕ್ರಮಕೈಗೊಳ್ಳಬೇಕಾದ ಅನಿವಾರ್ಯತೆಯಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಆನಂದ ಕೆ.ಮವ್ವಾರ್ ಹೇಳಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ವಿಷಯ ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮೊಗೇರ ಸಮಾಜಬಾಂಧವರು ನಾಡುನುಡಿಗೆ ನೀಡಿದ ಕೊಡುಗೆಗಳನ್ನು ಅವರು ಉದಾಹರಣೆ ಸಹಿತ ವಿವರಿಸಿದರು.
ಮದರು ಮಹಾಮಾತೆ ಮೊಗೇರ ಸಮಾಜದ ಗೌರವ ಸಲಹೆಗಾರ ರಾಮಪ್ಪ ಮಂಜೇಶ್ವರ, ಡಿ.ಕೃಷ್ಣ ದರ್ಭೆತ್ತಡ್ಕ, ನಿಟ್ಟೋಣಿ ಬಂದ್ಯೋಡು, ಉಪಾಧ್ಯಕ್ಷ ಸುರೇಶ ಅಜಕ್ಕೋಡು ಉಪಸ್ಥಿತಿಯಲ್ಲಿ ಚರ್ಚೆ ಸಂವಾದಗಳು ನಡೆಯಿತು. ಸುಂದರ ಬಾರಡ್ಕ, ಜಯಾರಾಮಪ್ಪ, ಶಶಿಧರ ಅಜಕ್ಕೋಡು, ಚಂದ್ರ ಮಲ್ಲಡ್ಕ, ಹರಿಶ್ಚಂದ್ರ ಪುತ್ತಿಗೆ, ಸುಧಾಕರ ಬೆಳ್ಳಿಗೆ, ರಾಜೇಶ್ ಪೆರಿಯಡ್ಕ, ರೂಪೇಶ್ ಬದಿಯಡ್ಕ, ಸುಂದರಿ ಉಳಿಯತ್ತಡ್ಕ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಮಿತಿ ಪ್ರ.ಕಾರ್ಯದರ್ಶಿ ಶಂಕರ ಡಿ. ದರ್ಭೆತ್ತಡ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಂಸ್ಕøತಿಕ ಸಂಚಾಲಕ ರಾಮ ಪಟ್ಟಾಜೆ ವಂದಿಸಿದರು. ಇದೇ ಸಂದರ್ಭದಲ್ಲಿ ಮೊಗೇರರ ಇತಿಹಾಸ ಸಂಶೋಧನೆ ಮತ್ತು ಅಧ್ಯಯನ ನಡೆಸಲು ಸಮಿತಿಯನ್ನು ರೂಪೀಕರಿಸಲಾಯಿತು.