ನವದೆಹಲಿ: ಕೃಷಿ ಮಸೂದೆಗಳಿಗೆ ಮೂರು ಬೇಡಿಕೆಗಳು ಈಡೇರುವವರೆಗೂ ಪ್ರತಿಪಕ್ಷಗಳು ರಾಜ್ಯಸಭಾ ಕಲಾಪ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ತಿಳಿಸಿದ್ದಾರೆ.
ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಮಸೂದೆಗಳ ಅಂಗೀಕಾರದಲ್ಲಿ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಎಂದು ಆರೋಪಿಸಿದ ಅವರು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೃಷಿ ಮಸೂದೆಗಳಿಗೆ ಅಂಕಿತ ಹಾಕಬಾರದು ಎಂದರು.
ಆದರೆ, ಒಂದು ವೇಳೆ ರಾಷ್ಟ್ರಪತಿ ಹಾಕಬೇಕಾದರೆ ಪ್ರತಿಪಕ್ಷಗಳ ಮೂರು ಬೇಡಿಕೆಗಳನ್ನು ಈಡೇರಿಸಿದರೆ ಕಲಾಪ ಬಹಿಷ್ಕಾರ ನಿಲ್ಲಿಸುವುದಾಗಿ ಹೇಳಿದರು.
ಬೇರೆ ಮಸೂದೆ ಜಾರಿಗೆ ತನ್ನಿ ಅಥವಾ ಖಾಸಗಿವರು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುವುದು ಕಾನೂನುಬಾಹಿರ ಎಂದು ಪ್ರಧಾನಿ ನರೇಂದ್ರ ಮೋದಿ ಅಥವಾ ಕೃಷಿ ಸಚಿವರು ಸದನದಲ್ಲಿ ಹೇಳಲಿ ಎಂದರು.
ಸ್ವಾಮಿನಾಥನ್ ಆಯೋಗದ ವರದಿ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು, ಅಲ್ಲದೇ ಏಜೆನ್ಸಿಗಳು ಮತ್ತು ಆಹಾರ ನಿಗಮಗಳು ಕನಿಷ್ಠ ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಕಡ್ಡಾಯಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.
ತಮ್ಮ ಈ ಬೇಡಿಕೆಗಳು ಈಡೇರುವವರೆಗೂ ಕಲಾಪ ಬಹಿಷ್ಕರಿಸುತ್ತೇವೆ. ನಾಲ್ಕನೇಯದಾಗಿ ಸಂಸದರ ಅಮಾನತನ್ನು ವಾಪಸ್ ಪಡೆಯಬೇಕು ಎಂದರು.
ಕೃಷಿ ಮಸೂದೆ ಸಂಬಂಧ ಚರ್ಚೆ ವೇಳೆಯಲ್ಲಿ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ಎಂಟು ಸಂಸದರನ್ನು ಸೋಮವಾರ ಅಮಾನತು ಮಾಡಲಾಗಿತ್ತು.