ಕಾಸರಗೋಡು: ಭ್ರಷ್ಟಾಚಾರ ಹಗರಣಗಳಿಗೆ ಸಂಬಂಧಿಸಿ ಆಡಳಿತ ಮತ್ತು ಪ್ರತಿಪಕ್ಷಗಳಿಂದ ಮಂಗಳವಾರ ಕಾಸರಗೋಡಿನಲ್ಲಿ ಏಕ ಕಾಲಕ್ಕೆ ಮೂರು ಕಡೆ ಪ್ರತಿಭಟನೆ ನಡೆಯಿತು.
ಎಡರಂಗ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ಕೆ.ಟಿ ಜಲೀಲ್ ರಾಜೀನಾಮೆಗೆ ಆಗ್ರಹಿಸಿ ಐಕ್ಯರಂಗ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಆಯೋಜಿಸಲಾಗಿದ್ದರೆ, ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ರಾಜೀನಾಮೆ ಒಳಗೊಂಡಂತೆ ರಾಷ್ಟ್ರೀಯ ಪ್ರತಿಭಟನೆ ಹಿನ್ನೆಲೆಯಲ್ಲಿ ಎಡರಂಗ ವತಿಯಿಂದ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಧರಣಿ ನಡೆಯಿತು. ಉನ್ನತ ಶಿಕ್ಷಣ ಸಚಿವ ಕೆ.ಟಿ ಜಲೀಲ್ ಮತ್ತು ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ವಿರುದ್ಧ ಎನ್‍ಡಿಎ ವತಿಯಿಂದ ವಿದ್ಯಾನಗರದಲ್ಲಿ ಪ್ರತಿಭಟನಾ ಸಂಗಮ ನಡೆಯಿತು.
ಐಕ್ಯರಂಗ ವತಿಯಿಂದ ನಡೆದ ಧರಣಿಯನ್ನು ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಟಿ.ಇ ಅಬ್ದುಲ್ಲ, ಎಡರಂಗದಿಂದ ನಡೆದ ಧರಣಿಯನ್ನು ಮಾಜಿ ಸಂಸದ ಪಿ.ಕರುಣಾಕರನ್, ಎನ್‍ಡಿಎ ಪ್ರತಿಭಟನಾ ಸಂಗಮವನ್ನು ಎನ್‍ಡಿಎ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಉದ್ಘಾಟಿಸಿದರು.