ನವದೆಹಲಿ: ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2020ಕ್ಕೆ ಬುಧವಾರ ರಾಜ್ಯಸಭೆಯ ಅನುಮೋದನೆ ದೊರೆಯಿತು.
ಗೃಹ ವ್ಯವಹಾರಗಳ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಬುಧವಾರ ಸದನದಲ್ಲಿ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ 2020 ಅನ್ನು ಮಂಡಿಸಿದರು.
ಮಸೂದೆ ಕುರಿತು ಮಾತನಾಡಿದ ಅವರು, ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2020 ರಾಷ್ಟ್ರೀಯ ಮತ್ತು ಆಂತರಿಕ ಭದ್ರತೆಗಾಗಿ ರೂಪಿಸಿರುವ ಕಾನೂನಾಗಿದೆ. ಭಾರತದ ರಾಜಕೀಯ ಮತ್ತು ಸಾಮಾಜಿಕ ಪ್ರವಚನಗಳಲ್ಲಿ ವಿದೇಶಿ ಪ್ರತಿನಿಧಿಗಳು ಪ್ರಾಬಲ್ಯ ಸಾಧಿಸದಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಮ್ಮು-ಕಾಶ್ಮೀರ ಅಧಿಕೃತ ಭಾಷೆ ಮಸೂದೆಗೆ ಲೋಕಸಭೆ ಅನುಮೋದನೆ:
ಜಮ್ಮು -ಕಾಶ್ಮೀರದಲ್ಲಿ ಉರ್ದು ಮತ್ತು ಇಂಗ್ಲಿಷ್ ಜೊತೆಗೆ ಹಿಂದಿ, ಕಾಶ್ಮೀರಿ ಮತ್ತು ಡೋಗ್ರಿ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿಸುವ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ.
ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಸದನದಲ್ಲಿ ಜಮ್ಮು-ಕಾಶ್ಮೀರ ಅಧಿಕೃತ ಭಾಷೆ ಮಸೂದೆಯನ್ನು ಮಂಡಿಸಿದರು.
ರಾಜ್ಯದಲ್ಲಿ ಶೇ 56 ಕ್ಕೂ ಹೆಚ್ಚು ಜನಸಂಖ್ಯೆ ಕಾಶ್ಮೀರಿ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಮಾತನಾಡುತ್ತಾರೆ. ಆದರೂ ಇದನ್ನು ಅಧಿಕೃತ ಭಾಷೆಯಾಗಿ ಗುರುತಿಸಲಾಗಿಲ್ಲ. ಏಕೆ? ಎಂದು ಪ್ರಶ್ನಿಸಿದರು.