ಎರ್ನಾಕುಳಂ: ಕೋವಿಡ್-19 ಮಹಾಮಾರಿಯ ಕಾರಣ ಶ್ರೀ ಮಾತಾ ಅಮೃತಾನಂದಮಯಿ ದೇವಿ ಅಮ್ಮನವರ 67ನೇ ಜನ್ಮದಿನವನ್ನು ವಿಶ್ವಶಾಂತಿಗಾಗಿ ಪ್ರಾರ್ಥನೆಯ ದಿನವಾಗಿ ರವಿವಾರ ಜಾಗತಿಕವಾಗಿ ಆಚರಿಸಲಾಯಿತು. ಆಶ್ರಮವಾಸಿಗಳು ಹಾಗೂ ಜಗತ್ತಿನೆಲ್ಲೆಡೆಯ ಭಕ್ತರು ಈ ದಿನವನ್ನು ಧ್ಯಾನ, ಪ್ರಾರ್ಥನೆ, ಪೂಜೆಗಳಿಗಾಗಿ ಮೀಸಲಿಟ್ಟರು. ಅಮ್ಮನವರು ತಮ್ಮ ವಾರ್ಷಿಕ ಜನ್ಮದಿನ ಸಂದೇಶವನ್ನು ನೀಡಿದರು.
ಸಾಮಾನ್ಯವಾಗಿ ಅಮ್ಮನವರ ಜನ್ಮದಿನದ ಸಂದರ್ಭದಲ್ಲಿ ಜಗತ್ತಿನಾದ್ಯಂತದಿಂದ ಲಕ್ಷಾಂತರ ಭಕ್ತರು ಅಮೃತಪುರಿ ಆಶ್ರಮಕ್ಕೆ ಯಾತ್ರೆಮಾಡಿ ಬರುತ್ತಾರೆ; ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಗಣ್ಯರೂ ಆಚರಣೆಯಲ್ಲಿ ಭಾಗವಹಿಸುತ್ತಾರೆ.
ಸಂದೇಶವನ್ನು, “ಅಮ್ಮನಿಗೆ ನಿಮ್ಮ ನಗುಮುಖವನ್ನು ಕಾಣಲಾಗದಿದ್ದರೂ ಅಮ್ಮ ನಿಮ್ಮ ಪ್ರತಿಯೊಬ್ಬರನ್ನೂ ಹೃದಯದಲ್ಲಿ ಕಾಣಬಲ್ಲರು. ಅಮ್ಮ ಸದಾ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ, ನಿಮಗಾಗಿ ಸದಾ ಪ್ರಾರ್ಥಿಸುತ್ತಾರೆ,” ಎನ್ನುತ್ತಾ ಆರಂಭಿಸಿದ ಅಮ್ಮ, ಕೋವಿಡ್-19 ಮಹಾಮಾರಿಯ ಪೂರ್ಣಜವಾಬ್ದಾರಿಯನ್ನು ಮನುಷ್ಯರ ಸ್ವಾರ್ಥತೆ ಹಾಗೂ ಪ್ರಕೃತಿಮಾತೆಯ ಮೇಲೆ ಮನುಷ್ಯರು ಮಾಡುತ್ತಿರುವ ಅಂತ್ಯವಿಲ್ಲದ ಶೋಷಣೆಯ ಮೇಲೆ ಹೊರಿಸಿದರು.
“ಪ್ರಕೃತಿಯು ಸುಮಾರು ಕಾಲದಿಂದ ಇದರ ಸೂಚನೆಯನ್ನು ನೀಡುತ್ತಾ ಇದೆ. ಆದರೆ ಮನುಷ್ಯ ಅತ್ಯಂತ ಶಕ್ತ ಸೂಚನೆ ಎದುರಾದಾಗಲೂ ಅದನ್ನು ನೋಡಲು, ಅದರಲ್ಲಿ ಅಡಗಿರುವ ಸೂಚನೆಯನ್ನು ಆಲಿಸಲು ಅಥವಾ ಪರಿಗಣಿಸಲು ಸಹ ನಿರಾಕರಿಸಿದ್ದಾನೆ. ನಾವು ಕಲಿತ ದುರಭ್ಯಾಸಗಳು ಈಗ ನಮ್ಮ ಸ್ವಭಾವವೇ ಆಗಿಬಿಟ್ಟಿವೆ. ಅವೇ ಕ್ರಮೇಣ ಮನುಷ್ಯರ ನಡೆನುಡಿಯನ್ನು, ಜೀವನ ಶೈಲಿಯನ್ನೂ ರೂಪಿಸಿವೆ. ನಾವು ಬದಲಾಗಲು ನಮ್ಮ ಅಹಂಕಾರಗಳು ಬಿಟ್ಟುಕೊಡುತ್ತಿಲ್ಲ. ‘ಪರಿಸ್ಥಿತಿ ಬಹುಕಾಲ ಹೀಗೆ ಕೆಟ್ಟಿರುವುದಿಲ್ಲ’ ಎಂದು ಭಾವಿಸಿದೆವು. ಆದರೆ ನಮ್ಮ ಬುದ್ಧಿಗಳ ಲೆಕ್ಕಾಚಾರ, ಆಧುನಿಕ ವಿಜ್ಞಾನದ ಲೆಕ್ಕಾಚಾರವೂ ಸೇರಿದಂತೆ ಎಲ್ಲಾ ಲೆಕ್ಕಾಚಾರಗಳೂ ತಲೆಕೆಳಗಾದವು. ಕೊರೋನಾ ವೈರಸ್ ನ ಎದುರಿಗೆ ಇಡೀ ಮನುಕುಲವು ಈಗ ಅಸಹಾಯಕವೂ, ಅರಕ್ಷಿತವೂ ಆಗಿದೆ!” ಎಂದು ಅಮ್ಮ ನುಡಿದರು.
“ಹಾಗಿದ್ದೂ ಇದು ತಪ್ಪುಗಳನ್ನು ಹುಡುಕುತ್ತಾ ಕೂರುವ ಕಾಲವಲ್ಲ, ಪರಿತಪಿಸುತ್ತಾ ಕೂರುವ ಸಮಯವಲ್ಲ; ಆಲಸ್ಯವನ್ನು ಓಡಿಸಿ, ಅತ್ಯಂತ ಶ್ರದ್ಧೆ ಮತ್ತು ಧೈರ್ಯದಿಂದ ನಾವು ಧಾರ್ಮಿಕ ಕೆಲಸಕಾರ್ಯಗಳಲ್ಲಿ ನಿರತರಾಗಬೇಕಾಗಿದೆ,” ಎಂದರು ಅಮ್ಮ.
ಮನುಕುಲವು ಪ್ರಗತಿಯ ಪಥದಲ್ಲಿ ಸಾಗಬೇಕೆಂದರೆ ಈ ಏಳು ಸೂಚನೆಗಳನ್ನು ಪಾಲಿಸಬೇಕೆಂದು ಅಮ್ಮ ಕರೆನೀಡಿದರು.
1. ನಿಮ್ಮ ನಿಮ್ಮ ದೇಹ ಮತ್ತು ಮನಸ್ಸುಗಳನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಿರಿ.
2. ಕೊಂಚವಾದರೂ ಆಧ್ಯಾತ್ಮಿಕ ಸಾಧನೆಯನ್ನು ಬಿಡದೆ ನಿಯತವಾಗಿ ಮಾಡಿರಿ.
3. ಪ್ರಕೃತಿ ಸಂರಕ್ಷಣೆಯನ್ನು ನಿತ್ಯಕರ್ಮದ ಭಾಗವಾಗಿಸಿಕೊಳ್ಳಿರಿ.
4. ಪ್ರಕೃತಿಯ ಶಕ್ತಿಯನ್ನು ಕ್ಷುಲ್ಲಕವೆಂದು ಭಾವಿಸದಿರಿ, ಕೀಳಾಗಿ ಕಾಣದಿರಿ.
5. ಜೀವನವನ್ನು ವಿಶಾಲ ದೃಷ್ಟಿಕೋನದಿಂದ ಕಾಣಿರಿ.
6. ನಿಮ್ಮ ಸ್ವಾರ್ಥ ಆಸಕ್ತಿಗಳಿಗೂ, ನಿಸ್ವಾರ್ಥ ಆಸಕ್ತಿಗಳಿಗೂ ನಡುವೆ ಸಮತೋಲನ ಉಳಿಸಿಕೊಳ್ಳಿರಿ.
7. ಪರಮಾತ್ಮನು ನಿಗದಿಮಾಡಿಟ್ಟಿರುವ ವೈಶ್ವಿಕ ನಿಯಮಗಳನ್ನು ಒಪ್ಪಿಕೊಂಡು, ಅವುಗಳಿಗೆ ವಿಧೇಯರಾಗಿರಿ.
ಮನುಷ್ಯನ ಸ್ವಾರ್ಥತೆಯನ್ನು ವಿವರಿಸುತ್ತಾ ಅಮ್ಮ, “ಒಮ್ಮೆ ಮಾತ್ರ ಬಳಸುವಂಥ ವಸ್ತುಗಳನ್ನು ಸೂಚಿಸಲು, ‘Use and Throw’ ಅಥವಾ ‘ಬಳಸಿ ಬಿಸಾಡು’ ಎಂಬ ನುಡಿ ಬಳಸುತ್ತಾರೆ. ಈ ನುಡಿಯು ವಾಸ್ತವವಾಗಿ ಈ ಕಾಲಘಟ್ಟದ ಮನೋಭಾವವನ್ನು ಸೂಚಿಸುತ್ತಿದೆ. ನಾವು ಕೊಂಡುಕೊಳ್ಳುವ ವಸ್ತುವಿನ ಬಗ್ಗೆಯಾಗಲೀ, ಪ್ರಕೃತಿ ಬಗ್ಗೆಯಾಗಲೀ ಅಥವಾ ನಮ್ಮ ಸಂಬಂಧಗಳ ಬಗ್ಗೆಯಾಗಲೀ ಇಂದಿನ ಜನರಲ್ಲಿರುವ ಮನೋಭಾವವನ್ನು ಈ ನುಡಿ ಬಿಂಬಿಸುತ್ತದೆ. ಈ ಮನೋಭಾವವು ಅಹಂಕಾರದಿಂದ ಮೂಡುತ್ತದೆ. ಅಹಂಕಾರವು, ನಮ್ಮದೇ ದೇಹದ ಜೀವಕೋಶಗಳು ನಮ್ಮ ಮೇಲೆ ಆಕ್ರಮಣ ಮಾಡಿ, ನಮ್ಮ ದೇಹವನ್ನು ನಾಶಮಾಡುವ AIDS ‘ಏಡ್ಸ್’ ನಂಥ ರೋಗದ ಹಾಗೆ. ಇನ್ನೊಬ್ಬರ ಭಾವನೆಗಳನ್ನಾಗಲೀ ಇನ್ನೊಬ್ಬರ ಹಕ್ಕುಗಳನ್ನಾಗಲೀ ಪರಿಗಣಿಸುವ ಸಾಮರ್ಥ್ಯವೇ ನಮಗಿಲ್ಲವಾಗುತ್ತದೆ. ಇಂದು ಜನರಿಗೆ ತಮ್ಮ ನೆರೆಹೊರೆಯವರಿಗೆ ತೊಂದರೆ ಕೊಡಲಾಗಲೀ ಅಥವಾ ಸ್ವಂತ ಲಾಭಕ್ಕಾಗಿ ಪ್ರಕೃತಿಯ ಶೋಷಣೆ ಮಾಡಲಾಗಲೀ ಪರಿತಾಪವೇ ಆಗುತ್ತಿಲ್ಲ. ಆದರೆ ಹೀಗೆ ಅಪಮಾರ್ಗದಿಂದ ಪಡೆದ ಯಾವ ಲಾಭವೂ ಯಾರಿಗೂ ಒಳ್ಳೆಯದನ್ನು ಮಾಡುವುದಿಲ್ಲ.”
“ಕೋವಿಡ್ ಮಹಾಮಾರಿಯು ಪ್ರಕೃತಿ ನಮಗೆ ನೀಡುತ್ತಿರುವ ಶಿಕ್ಷೆ ಏನಲ್ಲ” ಎಂದು ಅಮ್ಮ ಸ್ಪಷ್ಟವಾಗಿ ತಿಳಿಸಿ, “ಆದರೆ ಅದು ಮನುಷ್ಯನ ನಡವಳಿಕೆಯನ್ನು ತಿದ್ದಲು ಪ್ರಕೃತಿ ನೀಡುತ್ತಿರುವ ಎಚ್ಚರಿಕೆ” ಎಂದರು. “ಇಂಥ ವಿಕೋಪದ ಸಮಯದಲ್ಲಿ ‘ಪ್ರಕೃತಿ ಶಿಕ್ಷಿಸುತ್ತಿದೆ’ ಎನ್ನಿಸುತ್ತದೆ. ಆದರೆ ಹಾಗೆ ಭಾವಿಸದಿರಿ. ನಮ್ಮ ರೀತಿ ನೀತಿಗಳಲ್ಲಿ ಬದಲಾವಣೆ ತಂದುಕೊಳ್ಳಲು ಪ್ರಕೃತಿ ಕರೆ ನೀಡುತ್ತಿದ್ದಾಳೆ ಎಂದು ತಿಳಿಯಿರಿ. ‘ಪರಾಶಕ್ತಿ ಅಥವಾ ಪ್ರಕೃತಿಯೇ ನಾವು ಇನ್ನೂ ಹೆಚ್ಚಿನ ಕೆಟ್ಟದ್ದು ಮಾಡದಂತೆ ತಡೆಯಲು ಈಗ ಶಾಕ್ ಟ್ರೀಟ್ ಮೆಂಟ್ ನೀಡುತ್ತಿದ್ದಾಳೆ’ ಎಂದು ಭಾವಿಸಿರಿ. ಪ್ರಕೃತಿ ಮಾತೆಯಾಗಲೀ, ಭೂಮಿತಾಯಿಯೇ ಆಗಲಿ ಇಬ್ಬರೂ ಅತ್ಯಂತ ಸಹನಾಶೀಲರು. ಆದರೆ ಮನುಷ್ಯನು ಅವರ ಈ ಸಹನೆಯನ್ನು ತನಗೆ ಸಿಕ್ಕ ಪರವಾನಗಿ ಎಂದು ಭಾವಿಸಿಕೊಂಡು, ಪ್ರಕೃತಿಯ ಮೇಲೆ ಸಲ್ಲದ ಎಲ್ಲಾ ಥರದ ಶೋಷಣೆಯನ್ನು ಮಾಡುತ್ತಿದ್ದಾನೆ. ಈ ತಪ್ಪುಗಳನ್ನು ತಿದ್ದಿಕೊಳ್ಳುವ ಸಮಯ ಒದಗಿಬಂದಿದೆ,” ಎಂದು ಅಮ್ಮ ನುಡಿದರು.
ಕರುಣೆಯ ಅವಶ್ಯಕತೆಯ ಬಗ್ಗೆ ಒತ್ತಿಹೇಳುತ್ತಾ ಅಮ್ಮ, “ಹೂವಿನ ಸುಗಂಧವು ಗಾಳಿ ಬೀಸಿದ ಕಡೆಗೆ ಮಾತ್ರ ಹರಡುತ್ತದೆ. ಆದರೆ ಸಜ್ಜನಿಕೆಯ ಸುಗಂಧವು ಎಲ್ಲಾ ದಿಕ್ಕುಗಳಲ್ಲಿ ಸಮಾನವಾಗಿ ಹರಡುವಂಥದು. ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ನಾವು ಸಹಾಯ ಮಾಡಲಾರೆವು. ಆದರೆ ನಮ್ಮ ಸುತ್ತಮುತ್ತಲಿನ ಕೆಲವಾದರೂ ಜನರಿಗೆ ನಾವು ಕರುಣೆ ತೋರಿದರೆ, ಅದು ಅವರಿಂದ ಇನ್ನಷ್ಟು ಜನರಿಗೆ ಹರಡುತ್ತದೆ. ಇದು ಕ್ರಮೇಣವಾಗಿ ಶೃಂಖಲೆಯಾಗಿ ಹರಡುತ್ತದೆ. ಈ ‘ಕರುಣಾ ವೈರಸ್’ ಕೊರೋನಾ ವೈರಸ್ಸನ್ನು ಸೋಲಿಸಬಲ್ಲದು; ಇಂದಿನ ಪ್ರಪಂಚದಾದ್ಯಂತ ಹರಡಬೇಕಾಗಿರುವುದು ಇದೇ ಕರುಣಾ ವೈರಸ್,” ಎಂದರು ಅಮ್ಮ.
ಅಮ್ಮನ ನಿರ್ದೇಶನದಲ್ಲಿ ಆಶ್ರಮವಾಸಿಗಳು ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡುತ್ತಾ, ‘ಇಡೀ ಆಕಾಶದಿಂದ ಇಡೀ ಭೂಮಿಯ ಮೇಲೆ ಬಿಳಿಯಬಣ್ಣದ ಶಾಂತಿ ಪುಷ್ಪಗಳು ವರ್ಷಿಸುತ್ತಿವೆ’ ಎಂದಾಗಿ ಭಾವನೆ ಮಾಡಿಕೊಂಡರು. 2020 ವರ್ಷವು ಮನುಕುಲಕ್ಕೇ ಅತ್ಯಂತ ದುರಂತಮಯ ಕಾಲ ಎಂದು ಹಲವು ವರ್ಷಗಳ ಹಿಂದೆ ನುಡಿದಿದ್ದ ಅಮ್ಮ ಅಂದಿನಿಂದಲೇ ಈ ಪ್ರಾರ್ಥನಾ ವಿಧಾನವನ್ನು ಬೋಧಿಸುತ್ತಿರುವರು.