ಮಂಜೇಶ್ವರ: ಜುವೆಲ್ಲರಿ ವಂಚನೆ ಪ್ರಕರಣದ ಆರೋಪಿ ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಮತ್ತು ಚಿನ್ನ ಕಳ್ಳ ಸಾಗಾಣಿಕೆ ಆರೋಪದಲ್ಲಿರುವ ಕೇರಳ ವಿದ್ಯಾಭ್ಯಾಸ ಮಂತ್ರಿ ಕೆ.ಟಿ ಜಲೀಲ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಮಜೀರ್ಪಳ್ಳದಲ್ಲಿ ಗುರುವಾರ ಪಂಜಿನ ಮೆರವಣಿಗೆ ನಡೆಯಿತು.
ಮಜೀರ್ಪಳ್ಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಎಲ್.ಡಿ.ಎಫ್. ಹಾಗೂ ಯು. ಡಿ. ಎಫ್ ಎರಡೂ ರಂಗಗಳೂ ಭ್ರಷ್ಟಾಚಾರದಲ್ಲಿ ಒಂದೇ ನಾಣ್ಯದ ಎರಡು ಮುಖಗಳು. ಕೇರಳದಲ್ಲಿ ಪ್ರತಿಪಕ್ಷ ಮಾಡಬೇಕಾದ ಕೆಲಸವನ್ನು ಇವತ್ತು ಬಿಜೆಪಿ ಮಾಡುತ್ತಿದ್ದು, ಕೇರಳದಲ್ಲಿ ಯು.ಡಿ.ಯಫ್ ಹೆಸರಿಗೆ ಮಾತ್ರ ಇದೆ ಎಂದು ಆರೋಪಿಸಿದರು. ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಆರೋಪದಲ್ಲಿರುವ ಇಲ್ಲಿನ ಶಾಸಕರು ಯು.ಡಿ.ಎಫ್ ಘಟಕಕ್ಕೆ ಬೇಡವಾದ ವ್ಯಕ್ತಿಯಾದರೆ, ಮಂಜೇಶ್ವರದಲ್ಲಿ ಶಾಸಕರಾಗಿ ಮುಂದುವರಿಸುವುದು ಯಾವ ಪುರಷಾರ್ಥಕ್ಕಾಗಿ ಎಂಬುದನ್ನು ಮುಸ್ಲಿಂಲೀಗ್ ಸ್ಪಷ್ಟನೆ ಕೊಡಬೇಕು ಎಂದು ಆಗ್ರಹಿಸಿದರು. ಜಲೀಲ್ ಮತ್ತು ಕಮರುದ್ದೀನ್ ರಾಜೀನಾಮೆ ನೀಡುವಲ್ಲಿವರೆಗೆ ತೀವ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಅವರು ಮಾತನಾಡಿ ಮುಸ್ಲಿಂಲೀಗ್ ಎಲ್ಲೆಲ್ಲಿ ಇದೆಯೋ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುತ್ತದೆ. ವರ್ಕಾಡಿ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಅರಿವಿದ್ದು ಕಾಮಗಾರಿ ಪ್ರಾರಂಭಗೊಳ್ಳದ ಒಂದು ರಸ್ತೆಗೆ ಉದ್ಯೋಗ ಖಾತರಿ ಸಹಾಯಕ ಅಭಿಯಂತರನ ಜೊತೆ ಸೇರಿಕೊಂಡು ಹಣ ಲಪಟಾವಣೆಗೆ ಹೊಂಚು ಹಾಕಿರುವ ವಿಚಾರ ಜನಸಾಮಾನ್ಯರಿಗೆ ಗೊತ್ತಿರುವ ವಿಚಾರ. ಇದೀಗ ಭ್ರಷ್ಟಾಚಾರ ಮರೆಮಾಚಲು ಉದ್ಯೋಗ ಖಾತರಿ ಯೋಜನೆಯ ಇತರ ಉದ್ಯೋಗಸ್ಥರ ಮೇಲೆ ಆಪಾದನೆಗಳನ್ನು ಹೊರಿಸುವ ಕುತಂತ್ರ ವರ್ಕಾಡಿ ಗ್ರಾಮ ಪಂಚಾಯತಿಯಲ್ಲಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಕಮರುದ್ದೀನ್ ರಾಜೀನಾಮೆ ಕೊಡಬೇಕು ಮಾತ್ರವಲ್ಲ ವರ್ಕಾಡಿ ಗ್ರಾಮ ಪಂಚಾಯತಿಯ ಮುಸ್ಲಿಂ ಲೀಗ್ ಆಡಳಿತದಲ್ಲಿ ನಡೆದಿರುವ ಉದ್ಯೋಗ ಖಾತರಿ ಯೋಜನೆಯ ಅವ್ಯವಹಾರ ಬಗ್ಗೆ ವರ್ಕಾಡಿ ಗ್ರಾಮ ಪಂಚಾಯತಿ ಅಧ್ಯಕ್ಷರು ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಬಾಕ್ರಬೈಲ್ ವಹಿಸಿದ್ದರು.ಈ ಸಂದರ್ಭ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಯಾದವ ಬಡಾಜೆ, ಅಲ್ಪಸಂಖ್ಯಾತ ಮೋರ್ಚಾದ ನೇತಾರ ಅಬ್ದುಲ್ಲಾ ಡಿ.ಎಂ, ಹಿರಿಯ ನೇತಾರ ದೂಮಪ್ಪ ಶೆಟ್ಟಿ ತಾಮಾರು, ಪಂಚಾಯತಿ ಸದಸ್ಯರಾದ ಸದಾಶಿವ ನಾಯ್ಕ್, ಅನಂದ ತಚ್ಚಿರೆ, ವಸಂತ. ಎಸ್, ಮಂಜೇಶ್ವರ
ಬ್ಲಾಕ್ ಪಂಚಾಯತಿ ಸದಸ್ಯ ಸದಾಶಿವ ಯು, ಯುವಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪ್ರಜ್ವಿತ್ ಶೆಟ್ಟಿ ಸುಳ್ಯಮೆ,
ಹಾಗೂ ವಿವಿಧ ಮೋರ್ಚಾಗಳ ಮುಖಂಡರು ಉಪಸ್ಥಿತರಿದ್ದರು. ಬಿ.ಜೆ.ಪಿ ವರ್ಕಾಡಿ ಪಂಚಾಯತಿ ಸಮಿತಿ ಕಾರ್ಯದರ್ಶಿ ಜಗದೀಶ್ ಚೆಂಡೇಲ್ ಸ್ವಾಗತಿಸಿ, ಯುವಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿ ಅಧ್ಯಕ್ಷ ರಕ್ಷಣ್ ಅಡೆಕಳಕಟ್ಟೆ ವಂದಿಸಿದರು.