ಕಾಸರಗೋಡು: ಭಾರತೀಯ ಸಂತ ಪರಂಪರೆಯಲ್ಲಿ ಅತ್ಯಮೂಲ್ಯ ಕೊಡುಗೆಗಳ ಮೂಲಕ ಸದಾ ಸ್ಮರಣೀಯರಾದ ಬ್ರಹ್ಮೈಕ್ಯ ಶ್ರೀಮದ್ ಎಡನೀರು ಮಠಾಧೀಶ ಕೇಶವಾನಂದ ಭಾರತೀ ಪಾದಂಗಳ ಮೇಲ್ಪಂಕ್ತಿಯನ್ನು ಮುಂದುವರಿಸುವ ಹೊಣೆ ನಮಗಿದೆ. ಶ್ರೀಕ್ಷೇತ್ರ ಸುಬ್ರಹ್ಮಣ್ಯ ಮಠ ಮತ್ತು ಎಡನೀರು ಮಠಗಳ ಸಂಬಂಧ ಹಿಂದಿನ ಪರಂಪರೆಯಿಂದಲೇ ಅನ್ಯೋನ್ಯತೆಯಿಂದ ಕೂಡಿತ್ತು ಎಂದು ಶ್ರೀಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ಶ್ರೀಗಳು ಅನುಗ್ರಹ ಸಂದೇಶ ನೀಡಿದರು.
ಶ್ರೀಎಡನೀರು ಮಠದಲ್ಲಿ ಬುಧವಾರ ನಡೆದ ಬ್ರಹ್ಮೈಕ್ಯ ಶ್ರೀಕೇಶವಾನಂದ ಭಾರತೀ ಶ್ರೀಗಳ ಆರಾಧನಾ ಕಾರ್ಯಕ್ರಮದಂಗವಾಗಿ ಅಪರಾಹ್ನ ನಡೆದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಆಶೀರ್ವಚನಗೈದು ಅವರು ಮಾತನಾಡಿದರು.
ಧರ್ಮ, ಸಂಸ್ಕøತಿ, ಪರಂಪರೆಗಳ ಉತ್ಥಾನ ಪ್ರಕ್ರಿಯೆಯಲ್ಲಿ ಎಡನೀರು ಮಠದ ಹೆಗ್ಗುರುತುಗಳು ಈ ಹಿಂದಿನಂತೆ ಇನ್ನೂ ಮುಂದುವರಿಯಲಿದೆ ಎಂದ ಅವರು ಪೀಠಾರೋಹಣಗೈಯ್ಯಲಿರುವ ಸಚ್ಚಿದಾನಂದ ಶ್ರೀಗಳ ಅನುಭವ, ಸಜ್ಜನಿಕೆಯ ವ್ಯಕ್ತಿತ್ವ ಇನ್ನಷ್ಟು ಉಚ್ಚ್ರಾಯತೆಗೆ ಕಾರಣವಾಗುವುದೆಂದು ಅವರು ತಿಳಿಸಿದರು.
ಬಲರಾಮ ಆಚಾರ್ಯ ಪುತ್ತೂರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಉಚ್ಚಿಲ ಪದ್ಮನಾಭ ತಂತ್ರಿ ಉಪಸ್ಥಿತರಿದ್ದು ಮಾತನಾಡಿದರು. ವಿದ್ವಾನ್.ಪಂಜ ಭಾಸ್ಕರ ಭಟ್ ಹಾಗೂ ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್ ಗುರುವಂದನೆ ಸಲ್ಲಿಸಿದರು. ಸೋಂದಾ ಸ್ವರ್ಣವಲ್ಲಿ ಮಠದ ಪ್ರತಿನಿಧಿಗಳು ಉಪಸ್ಥಿತರಿದ್ದು ಸ್ವರ್ಣವಲ್ಲಿ ಶ್ರೀಗಳ ಸಂದೇಶ ವಾಚಿಸಿದರು.
ಕುಂಟಾರು ರವೀಶ ತಂತ್ರಿ ಸ್ವಾಗತಿಸಿ, ಕೆಯ್ಯೂರು ನಾರಾಯಣ ಭಟ್ ವಂದಿಸಿದರು. ಸೂರ್ಯನಾರಾಯಣ ಎಡನೀರು ಕಾರ್ಯಕ್ರಮ ನಿರೂಪಿಸಿದರು.